ಉದಯವಾಹಿನಿ, ಹಳೇಬೀಡು: ಕರಿಯಮ್ಮ ದೇವಾಲಯ ಪುನರ್ ನಿರ್ಮಾಣದ ಉದ್ದೇಶದಿಂದ 9 ವರ್ಷದಿಂದ ಸ್ಥಗಿತಗೊಂಡಿದ್ದ ಉಡಸಲಮ್ಮ ಹಾಗೂ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಆರಂಭವಾಯಿತು.ಬೆಳಿಗ್ಗೆ 5.30ಕ್ಕೆ ಕರಿಯಮ್ಮ ಹಾಗೂ ಪರಿವಾರ ದೇವತೆಗಳನ್ನು ಉಡಸಲಮ್ಮ ದೇವಾಲಯ ಆವರಣಕ್ಕೆ ಕರೆ ತಂದು ವಿಧಿ ವಿಧಾನದೊಂದಿಗೆ ಗಂಗಾಸ್ನಾನ ನೆರವೇರಿಸಲಾಯಿತು.
ನಂತರ ದೇವರಿಗೆ ನೈವೇದ್ಯ ಸಮರ್ಪಿಸಿ, ಗ್ರಾಮಕ್ಕೆ ಒಳಿತಾಗಲಿ ಎಂದು ಭಕ್ತರು ಪ್ರಾರ್ಥಿಸಿದರು.
ಏ.16ರಂದು ಊರಿನ ಬೀದಿಗಳಲ್ಲಿ ಕರಿಯಮ್ಮ ಪರಿವಾರ ದೇವತೆಗಳ ಮೆರವಣಿಗೆ ನಡೆಯುತ್ತದೆ. ಎ.17ರಂದು ಬಸ್ತಿಹಳ್ಳಿಗೆ ದೇವಿಯನ್ನು ಕರೆದೊಯ್ಯುತ್ತಾರೆ. ಅಂದು ಗ್ರಾಮದಲ್ಲಿ ಮದುವೆ ಸಂಭ್ರಮ ಮನೆ ಮಾಡುತ್ತದೆ. ದೊಡ್ಡ ಚಪ್ಪರ ಹಾಕಿ, ಹೂವಿನ ಅಲಂಕಾರ ಮಾಡಲಾಗುತ್ತದೆ. ಮದುವಣಗಿತ್ತಿ ಶಾಸ್ತ್ರದಿಂದ ಧಾರೆ ಮುಹೂರ್ತದವರೆಗೆ ಮದುವೆಯ ಸಾಂಪ್ರದಾಯಿಕ ಶಾಸ್ತ್ರಗಳನ್ನು ನೆರವೇರಿಸುತ್ತಾರೆ. ನಂತರ ದೇವಿ ಹಾಗೂ ಪರಿವಾರ ದೇವತೆಗಳ ಮೆರವಣಿಗೆ ನಡೆಯುತ್ತದೆ. ಬಸ್ತಿಹಳ್ಳಿಯ ಮನೆಗಳಲ್ಲಿ ಹಬ್ಬ ಆಚರಿಸುತ್ತಾರೆ ಎಂದು ಕರಿಯಮ್ಮ ದೇವಾಲಯ ಟ್ರಸ್ಟ್ ಖಜಾಂಚಿ ಗೋಪಾಲಶೆಟ್ಟಿ ತಿಳಿಸಿದರು. ಏ.18ರಂದು ಬೆಳಿಗ್ಗೆ 4ರಿಂದಲೇ ಕರಿಯಮ್ಮ ದೇವಾಲಯದಲ್ಲಿ ಪೂಜಾ ವಿಧಾನ ಆರಂಭವಾಗುತ್ತದೆ. 5 ಗಂಟೆಗೆ ದೇವಾಲಯ ಆವರಣದಲ್ಲಿ
ಕೆಂಡೋತ್ಸವ ನಡೆಯುತ್ತದೆ. ನಂತರ ಕರಿಯಮ್ಮ ಪರಿವಾರ ದೇವತೆಗಳನ್ನು ಉಡಸಮ್ಮ ದೇವಾಲಯ ಆವರಣಕ್ಕೆ ಕರೆತರಲಾಗುವುದು.
ದೇವಾಲಯ ಆವರಣದಲ್ಲಿ ಪಲ್ಲಕ್ಕಿ ಉತ್ಸವ, ಚಾಮದೇವರ ಕುಣಿತ ಹಾಗೂ ಕೆಂಚರಾಯನ ಕುಣಿತ ನಡೆಯುತ್ತದೆ.
ಮಧ್ಯಾಹ್ನ 3 ಗಂಟೆಗೆ ಉಡಸಮ್ಮ ದೇವಾಲಯ ಮುಂಭಾಗದ ಮೈದಾನದಲ್ಲಿ ಸಿಡಿ ಉತ್ಸವ ನಡೆಯುತ್ತದೆ. ಸಂಜೆ ಕರಿಯಮ್ಮ ಪರಿವಾರ ದೇವತೆಗಳನ್ನು ವಾದ್ಯ ವೈಭವದೊಂದಿಗೆ ಕರಿಯಮ್ಮ ದೇವಾಲಯ ಆವರಣಕ್ಕೆ ಕರೆ ತರಲಾಗುವುದು. ಅಮ್ಮನವರ ಉಯ್ಯಾಲೆ ಉತ್ಸವ ಹಾಗೂ ಓಕುಳಿ ನಡೆಯುತ್ತದೆ ಎಂದು ಕರಿಯಮ್ಮ ದೇವಿ ಟ್ರಸ್ಟ್ ಉಪಾಧ್ಯಕ್ಷ ಎಚ್.ಎಂ.ಗಣೇಶ ತಿಳಿಸಿದರು.
