ಉದಯವಾಹಿನಿ, ಬೆಂಗಳೂರು: ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದ್ದು, ಕೊನೆಯ ದಿನವಾದ ಗುರುವಾರ ಶಿವಮೊಗ್ಗ ಮತ್ತು ಬೀದರ್​ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಅಧಿಕಾರಿಗಳು ಸೂಚನೆ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೀದರ್​​ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲು ಒಪ್ಪದೇ ಗಣಿತ ಪರೀಕ್ಷೆಯಿಂದ ಹೊರಗುಳಿದಿದ್ದಾನೆ. ಇದರಿಂದ ಆತನ ಎಂಜಿನಿಯರಿಂಗ್ ಭವಿಷ್ಯ ಅತಂತ್ರಗೊಂಡಿದೆ.
ಬೀದರ್​​ನ ವಿದ್ಯಾರ್ಥಿ ಕಳೆದ ಬುಧವಾರ ಜನಿವಾರ ಧರಿಸಿ ಬೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ. ಗುರುವಾರ ಗಣಿತ ಪರೀಕ್ಷೆಗೆ ಬಂದಾಗ ಜನಿವಾರ ನೋಡಿದ ಪರೀಕ್ಷಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರಿವಾರ ತೆಗೆಯಲ್ಲ, ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಬೇಡಿಕೊಂಡಿದ್ದಾನೆ. ಕೊನೆಗೆ ಪರೀಕ್ಷೆಯಿಂದಲೇ ಆತ ದೂರ ಉಳಿದಿದ್ದಾನೆ ಎಂದು ವರದಿಗಳು ತಿಳಿಸಿವೆ.
ಇದೇ ರೀತಿ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿ ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿರುವ ಆರೋಪ ಕೇಳಿಬಂದಿದೆ.
ಎರಡೂ ಪ್ರಕರಣದ ಬಗ್ಗೆ ರಾಜ್ಯ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಬೇಷರತ್​ ಕ್ಷಮೆಯಾಚಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದೆ.

Leave a Reply

Your email address will not be published. Required fields are marked *

error: Content is protected !!