ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಷ್ಟೇ ಅಭಿವೃದ್ಧಿಗೊಂಡರೂ ಇಲ್ಲಿನ ರಸ್ತೆ ಗುಂಡು ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ದಿಢೀರನೆ ಉದ್ಭವವಾಗುವ ಗುಂಡಿಗಳಿಂದಾಗಿ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದ ಘಟನೆಗಳು ಪ್ರತಿ ನಿತ್ಯ ನಡೆಯುತ್ತಲೇ ಇರುತ್ತವೆ. ಈ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದ್ದು, ಇಕೋಫಿಕ್ಸ್ ಬಳಕೆಗೆ ನಿರ್ಧರಿಸಿದೆ. ಇದರಂತೆ ಗುರುವಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ – ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಲೋಕೋಪಯೋಗಿ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ, ರಾಮುಕಾ ಗ್ಲೋಬಲ್ ಸರ್ವೀಸಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ – ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಯು ತೇವಾಂಶವಿರುವ ರಸ್ತೆಗಳಲ್ಲಿಯೂ ಕೂಡ ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ಬಳಸಿಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚುವುದನ್ನು ಕಂಡುಹಿಡಿದಿದ್ದು, ಇದರಿಂದಾಗಿ ಅತಿಯಾಗಿ ಮಳೆಯಾಗುವ ಜಿಲ್ಲೆಗಳಲ್ಲಿ ಆಗಿಂದಾಗ್ಗೆ ಉಂಟಾಗುವ ರಸ್ತೆ ಗುಂಡಿಗಳನ್ನು ತೇವಾಂಶ ಇದ್ದಾಗಲೂ ಕೂಡ ಕಡಿಮೆ ಸಮಯದಲ್ಲಿ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ಸರ್ಕಾರವು, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಹಾಗೂ ರಾಮುಕ ಗ್ಲೋಬಲ್ ಸರ್ವಿಸಸ್ ರವರ ಸಹಯೋಗದೊಂದಿಗೆ ರಾಜ್ಯ ಹೆದ್ದಾರಿ 265 ರ ರಸ್ತೆಯಲ್ಲಿ ಪ್ರಾಯೋಗಿಕವಾಗಿ 2024ನೇ ಡಿಸೆಂಬರ್ 10 ರಂದು ಗುಂಡಿ ಮುಚ್ಚುವ ಕಾರ್ಯ ಮಾಡಲಾಗಿದ್ದು, ಇದರ ಫಲಿತಾಂಶದ ಆಧಾರದ ಮೇಲೆ ರಾಜ್ಯದಾದ್ಯಂತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.
