ಉದಯವಾಹಿನಿ,ಬೆಂಗಳೂರು: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿ.ವೈ.ವಿಜಯೇಂದ್ರ ಅವರಿಗೆ ಬರೆದಿರುವ ಪತ್ರದಲ್ಲಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ರಾಮಸ್ವಾಮಿ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆ? ಹಾಗೂ ಮುಂದಿನ ನಡೆ ಏನು? ಎಂಬುದನ್ನೂ ಪತ್ರದಲ್ಲಿ ತಿಳಿಸಿದ್ದು, ತಮನ್ನು ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಮತ್ತೊಂದೆಡೆ ಅವರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಮಾತುಗಳು ಕೂಡ ಕೇಳಿಬರುತ್ತಿವೆ.
ರಾಜೀನಾಮೆ ಪತ್ರದಲ್ಲೇನಿದೆ? : ರಾಮಸ್ವಾಮಿ ಅವರು ವಿಜಯೇಂದ್ರಗೆ ಬರೆದಿರುವ ಪತ್ರದಲ್ಲಿ, ವಿಶ್ವ ತಾಪಮಾನ ವಿಪರೀತ ಏರಿಕೆಯಿಂದ ಹವಾಮಾನದ ಅಸಮತೋಲನ ಉಂಟಾಗಿದ್ದು, ಇದರಿಂದ ನೆರೆ, ಬರ, ಚಂಡಮಾರುತ, ಭೂಕಂಪಗಳು ಹೆಚ್ಚಾಗಿವೆ. ನಾವು ಕುಡಿಯುತ್ತಿರುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ಎಲ್ಲವೂ ವಿಷಪೂರಿತವಾಗಿದೆ.
ಬೆಟ್ಟ-ಗುಡ್ಡ, ಅರಣ್ಯ ನಾಶದಿಂದ ನದಿ ಜಲಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟವೂ ಕುಸಿದು ಹೋಗಿದೆ. ಇದರಿಂದ ಜೀವ ಸಂಕುಲಗಳಿಗೆ ಸಂಕಷ್ಟ ಎದುರಾಗಿದೆ. ಈಗಲಾದರೂ ನಾವು ಜನ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆ ಕೆಲಸ ಮಾಡಬೇಕು ಎಂದು ರಾಮಸ್ವಾಮಿ ಹೇಳಿದ್ದಾರೆ.
