ಉದಯವಾಹಿನಿ, ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಮೇಲೆ ಚಾರ್ಜ್‌ಶೀಟ್‌ ಆಗಿರುವ ಪ್ರಕರಣವೊಂದರಲ್ಲಿ ಪ್ರಾಸಿಕ್ಯೂಷನ್‌ಗೆ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಅನುಮತಿ ನೀಡಿದ್ದಾರೆ.
ಹನಿಟ್ರ್ಯಾಪ್‌ ನಡೆಸಲು ಎಚ್‌ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡಿದ್ದು, ದಲಿತರ ಮೇಲೆ ಜಾತಿನಿಂದನೆ ಒಳಗೊಂಡಂತೆ ಬಹಳ ಗಂಭೀರ ಆರೋಪಗಳನ್ನು ಶಾಸಕ ಮುನಿರತ್ನ ಎದುರಿಸುತ್ತಿದ್ದಾರೆ. ಅವರ ಮೇಲೆ ಎಫ್‌ಐಆರ್‌ ಕೂಡಾ ದಾಖಲಾಗಿದೆ. ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಇದ್ದರು. ಆ ನಂತರ ಜಾಮೀನು ಪಡೆದು ಹೊರಬಂದು ಕಳೆದ ಬಜೆಟ್‌ ಅಧಿವೇಶನದಲ್ಲೂ ಭಾಗಿಯಾಗಿದ್ದರು.
ಬಜೆಟ್‌ ಅಧಿವೇಶನದಲ್ಲಿ ಸಚಿವ ಕೆ.ಎನ್‌.ರಾಜಣ್ಣ ಹನಿಟ್ರ್ಯಾಪ್‌ ನಡೆಯುತ್ತಿದೆ ಎಂದು ಹೇಳಿದ್ದು, ಆಗ ದೊಡ್ಡ ಚರ್ಚೆಯ ವಿಷಯವಾಗಿತ್ತು. ಬಿಜೆಪಿ ಶಾಸಕರು ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ಮಾಡಿದ್ದರು. ಈ ವೇಳೆ ಹನಿಟ್ರ್ಯಾಪ್‌ ಹಾಗೂ ಜಾತಿ ನಿಂದನೆ ಆರೋಪ ಹೊತ್ತಿದ್ದ ಮುನಿರತ್ನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಟೀಕೆಗೆ ಗುರಿಯಾಗಿತ್ತು.
ಇದೀಗ ಜಾತಿನಿಂದನೆ ಕೇಸ್‌‍ ಶಾಸಕ ಮುನಿರತ್ನಗೆ ಸಂಕಷ್ಟ ತಂದೊಡ್ಡಿದೆ. ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಸ್ಪೀಕರ್‌ ಯು. ಟಿ.ಖಾದರ್‌ ಅನುಮತಿ ಕೊಟ್ಟಿದ್ದಾರೆ. ಈ ಸಂಬಂಧ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ. ಜಾತಿನಿಂದನೆ ಆರೋಪ ಸಂಬಂಧ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಯನ್ನು ಸಿಐಡಿಯ ಎಸ್‌‍ಐಟಿಗೆ ವಹಿಸಲಾಗಿತ್ತು. ತನಿಖೆ ನಡೆಸಿದ್ದ ಎಸ್‌‍ಐಟಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಮುನಿರತ್ನ ಶಾಸಕರಾಗಿರುವ ಕಾರಣ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸ್ಪೀಕರ್‌ ಮೊರೆ ಹೋಗಿತ್ತು. ಇದೀಗ ಸ್ಪೀಕರ್‌ ಯು.ಟಿ.ಖಾದರ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರಿಂದ ಕೋರ್ಟ್‌ ವಿಚಾರಣೆ ನಡೆಸಲು ಅನುಕೂಲ ಆಗಲಿದೆ.

Leave a Reply

Your email address will not be published. Required fields are marked *

error: Content is protected !!