ಉದಯವಾಹಿನಿ, ಬೆಂಗಳೂರು: ಶಾಶ್ವತ ಹಿಂದುಳಿದ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲ ಹಸ್ತಪ್ರತಿ ನಾಪತ್ತೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021 ರ ಅಕ್ಟೋಬರ್‌ನಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್‌ ಹೆಗ್ಡೆಯವರು ಸರ್ಕಾರಕ್ಕೆ ಪತ್ರ ಬರೆದು ಜಾತಿಗಣತಿ ವರದಿ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಸೀಲ್ಡ್ ಬಾಕ್ಸ್ ತೆರೆದಾಗ ಮುದ್ರಿತ ವರದಿಯಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಇಲ್ಲ. ಇದರ ಜೊತೆಗೆ ಮೂಲ ಹಸ್ತಪ್ರತಿ ಇರಲಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ಅವರು ಹೇಳಿದರು.
ಸರ್ಕಾರ ಈಗ ಹೇಳಲಿ. ಈ ಜಾತಿಗಣತಿ ವರದಿ ವರ್ಜಿನಲ್ಲಾ?, ಮೂಲ ವರದಿಯ ಹಸ್ತಪ್ರತಿಯೇ ಸೀಲ್‌್ಡಬಾಕ್‌್ಸನಲ್ಲಿ ಇಲ್ಲ ಎಂದ ಮೇಲೆ ವರದಿ ಹೇಗೆ ವರ್ಜಿನಲ್‌ ಆಗುತ್ತದೆ?, ಇದು ರಕ್ತ ಕಣ್ಣೀರು ಸಿನಿಮಾ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಜಾತಿಗಣತಿ ವಿಚಾರವನ್ನು ಹೊರಗೆ ತಂದರು. ಅವರು ಯಾವಾಗ ಬೇಕೋ ಆಗ ವರದಿ ನೀಡುತ್ತಾರೆ. ಇದಕ್ಕೆ ತಮೊಂದಿಗೆ ನಾಟಕ ಕಂಪನಿಯನ್ನು ಇಟ್ಟುಕೊಂಡಿದ್ದಾರೆ. ಇದು ಶಕುನಿ ಸರ್ಕಾರ. ಅಭಿವೃದ್ಧಿ ಬೇಕಾಗಿಲ್ಲ ಎಂದು ಟೀಕಾಪ್ರಹಾರ ನಡೆಸಿದರು. ಆಯೋಗದ ಅಧ್ಯಕ್ಷರೇ ವರದಿಯ ಮೂಲಪ್ರತಿ ಇಲ್ಲ ಎಂದಿದ್ದಾರೆ. ಅವರು ಸಮೀಕ್ಷೆ ಮಾಡಿದ್ದು 6 ಕೋಟಿ ಜನರನ್ನು. ಉಳಿದ ಒಂದು ಕೋಟಿ ಜನರಿಗೆ ನಾಮವೇ? ಎಂದು ಪ್ರಶ್ನಿಸಿದ ಅವರು, ಜಾತಿಗಣತಿಯ ವರ್ಜಿನಲ್‌ ಪ್ರತಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಈಗ ಮಂಡಿಸಿರುವ ವರದಿ ನಕಲಿ ಎಂದು ಆರೋಪಿಸಿದರು.
ಸಮೀಕ್ಷೆ ಮಾಡುವವರು ಮಠಕ್ಕೆ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀಗಳೇ ಹೇಳಿದ್ದಾರೆ. ಕಾಂಗ್ರೆಸ್‌‍ನ ಕೆಲ ಶಾಸಕರೂ ಸಹ ನಮ ಮನೆಗಳಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಸಮೀಕ್ಷೆಗಳಿಗೆ ಖರ್ಚು ಮಾಡಿದ್ದ 169 ಕೋಟಿ ರೂ. ದೊಡ್ಡ ಹಗರಣವಾಗಿದೆ. ಮುಂದೆ ನಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಹಗರಣದ ತನಿಖೆ ಮಾಡಿಸುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!