ಉದಯವಾಹಿನಿ, ನವದೆಹಲಿ: ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಎದ್ದ ದಂಗೆಯಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಅಲ್ಲಿಯ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ರೆಡ್ ಕಾರ್ನರ್ ನೋಟೀಸ್ ನೀಡುವಂತೆ ಇಂಟ‌ರ್ ಪೋಲ್‌ಗೆ ಮನವಿ ಮಾಡಲಾಗಿದೆ. ಬಾಂಗ್ಲಾದೇಶ ಪೊಲೀಸರ ರಾಷ್ಟ್ರೀಯ ಕೇಂದ್ರ ಬ್ಯೂರೋ ಇಂಟರ್‌ಪೋಲ್‌ಗೆ ಶೇಖ್ ಹಸೀನಾ ಸೇರಿದಂತೆ 12 ವ್ಯಕ್ತಿಗಳ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸುವಂತೆ ಕೋರಿಕೆಯನ್ನು ಸಲ್ಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
77 ವರ್ಷದ ಹಸೀನಾ, ಕಳೆದ ವರ್ಷ ಆಗಸ್ಟ್‌ನಲ್ಲಿ ಭುಗಿಲೆದ್ದ ಗಲಭೆಗಳ ನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಶೇಖ್ ಹಸೀನಾ ಅವರನ್ನು ಮರಳಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆಕೆಯ ಪಾಸ್‌ಪೋರ್ಟ್ ಕೂಡ ರದ್ದುಗೊಂಡಿದೆ. ಅವರು ಭಾರತ ಸರ್ಕಾರಕ್ಕೂ ಪತ್ರ ಬರೆದರು. ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಫೆ.6ರಂದು ಶೇಖ್ ಹಸೀನಾ ಭಾಷಣದಿಂದ ಆಕ್ರೋಶಗೊಂಡ ಉದ್ದಿಕ್ಷರ ಗುಂಪೊಂದು ಢಾಕಾದಲ್ಲಿರುವ ಅವರ ತಂದೆಯ ನಿವಾಸವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬು‌ರ್ ರೆಹಮಾನ್ ಅವರ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಿದ್ದರು. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಮೂಲಕ ಮನೆ ನಾಶಮಾಡಲು ಯತ್ನಿಸಿದ್ದರು. ಶೇಖ್ ಹಸೀನಾರನ್ನು ವಾಪಾಸ್ ಕರೆಸಿಕೊಳ್ಳಲು ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಕೆಲವುದಿನಗಳ ಹಿಂದೆಯಷ್ಟೇ ಢಾಕಾ ನ್ಯಾಯಾಲಯವು ಆಕೆಯ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿತ್ತು. ಗಡಿಪಾರಾಗಿ ಭಾರತದಲ್ಲಿರುವ ಹಸೀನಾ ಅವರ ಧನ್ನೊಂಡಿ ನಿವಾಸ ಸುದಾಸಧನ್ ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿತ್ತು. ಇದೀಗ ಹಸೀನಾರನ್ನು ವಾಪಾಸ್ ಕರೆಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಬಾಂಗ್ಲಾದೇಶ ಇಂಟರ್‌ ಪೋಲ್ ಮೊರೆ ಹೋಗಿದೆ. ಈ ಬಗ್ಗೆ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಮಾಧ್ಯಮ) ಎನಾಮುಲ್ ಹಕ್ ಸಾಗೋರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಹಸೀನಾ ವಿರುದ್ಧ ರೆಡ್‌ ಕಾರ್ನರ್ ನೊಟೀಸ್ ಜಾರಿಗೊಳಿಸುವಂತೆ ಇಂಟರ್‌ ಪೋಲ್‌ಗೆ ಮನವಿ ಮಾಡಲಾಗಿದೆ.

 

Leave a Reply

Your email address will not be published. Required fields are marked *

error: Content is protected !!