ಉದಯವಾಹಿನಿ, ಮಂಗಳೂರು : ಸುಹಾಸ್‌ಶೆಟ್ಟಿ ಕೊಲೆಯ ಆರೋಪಿಗಳ ಬಂಧನದ ಬಳಿಕ ಮಂಗಳೂರಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಪ್ರವಾಸೋದ್ಯಮ ಚಟುವಟಿಕೆಗಳು ಪುನರಾರಂಭಗೊಂಡಿವೆ.ಮೇ.1ರ ರಾತ್ರಿ 8.30ರ ಸುಮಾರಿಗೆ ಸುಹಾಶ್ ಶೆಟ್ಟಿ ಹತ್ಯೆಯಾದ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ಜಾರಿಗೊಂಡಿತ್ತು. ಪ್ರವಾಸೋದ್ಯಮವೂ ಸ್ಥಗಿತಗೊಂಡಿತ್ತು. ಮಂಗಳೂರಿನಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಈಗ ತಿಳಿಯಾಗಿದೆ.
ಕೊಲೆಯ 8 ಮಂದಿ ಆರೋಪಿಗಳನ್ನು ಬಂಧಿಸಿದ ಬಳಿಕ ಪರಿಸ್ಥಿತಿ ಹಂತಹಂತವಾಗಿ ಸುಧಾರಿಸಲಾರಂಭಿಸಿದೆ. ಕಳೆದ 2023 ರಲ್ಲಿ ನಡೆದಿದ್ದ ಸರಣಿ ಕೊಲೆಗಳಿಂದಾಗಿ ಮಂಗಳೂರಿನ ಪ್ರವಾಸೋದ್ಯಮದಲ್ಲಿ ಭಾರೀ ವ್ಯತ್ಯಾಸಗಳಾಗಿದ್ದವು. ಇತ್ತೀಚೆಗಷ್ಟೇ ಆರ್ಥಿಕ ಚಟುವಟಿಕೆಗಳು ಸುಧಾರಿಸಿ ಸಹಜ ಸ್ಥಿತಿಗೆ ಮರಳಿತು.
ಈ ನಡುವೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದರಿಂದಾಗಿ ಮತ್ತೆ ಕೋಮುಗಲಭೆಯ ಆತಂಕ ನಿರ್ಮಾಣವಾಗಿತ್ತು. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಚಟುವಟಿಕೆಗಳೂ ಬಂದ್ ಆಗಿದ್ದವು. ವಾರಾಂತ್ಯದ ಕಾರಣಕ್ಕಾಗಿ ನಿನ್ನೆ ಒಂದಷ್ಟು ಪ್ರವಾಸಿಗರು ಮಂಗಳೂರಿಗೆ ಭೇಟಿ ನೀಡಿದ್ದರು. ಇಂದು ಭಾನುವಾರ ರಜಾ ದಿನ ಎಂದಿನಂತೆ ಪ್ರವಾಸಿಗರ ಸಂಖ್ಯೆ ಕಂಡುಬರುತ್ತಿದೆ. ಬೀಚ್‌ಗಳಲ್ಲಿ ಪ್ರವಾಸಿಗರು ತಮ್ಮ ರಜೆಯ ಮೋಜನ್ನು ಅನುಭವಿಸಿದರು.

 

Leave a Reply

Your email address will not be published. Required fields are marked *

error: Content is protected !!