ಉದಯವಾಹಿನಿ, ಬಿಜಾಪುರ: ತೆಲಂಗಾಣದ ಗಡಿಯಲ್ಲಿರುವ ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯ ಅರಣ್ಯದಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಎನ್‌ ಕೌಂಟರ್‌ ನಲ್ಲಿ 15ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತರರಾಜ್ಯ ಗಡಿಯಲ್ಲಿರುವ ಕರ್ರೆಗುಟ್ಟಾ ಹಿಲ್ಸ್ ಅರಣ್ಯದಲ್ಲಿ ಇಂದು ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದರು.ಈವರೆಗೆ 15 ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ ಮತ್ತು ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಹೇಳಿದರು.
ಬಸ್ತಾರ್‌ ಪ್ರದೇಶದಲ್ಲಿ ನಡೆಯುತ್ತಿರುವ ಆಪರೇಷನ್‌ ಸಂಕಲ್ಪವು ಜಿಲ್ಲಾ ರಿಸರ್ವ್‌ ಗಾರ್ಡ್‌ (ಡಿಆರ್‌ಜಿ), ಬಸ್ತಾರ್‌ ಫೈಟರ್ಸ್‌, ವಿಶೇಷ ಕಾರ್ಯಪಡೆ (ಎಸ್ಟಿಎಫ್‌‍), ರಾಜ್ಯ ಪೊಲೀಸ್‌‍ನ ಎಲ್ಲಾ ಘಟಕಗಳು, ಕೇಂದ್ರ ಮೀಸಲು ಪೊಲೀಸ್‌‍ ಪಡೆ (ಸಿಆರ್‌ಪಿಎಫ್‌‍) ಮತ್ತು ಅದರ ಗಣ್ಯ ಘಟಕ ಕೋಬ್ರಾ ಸೇರಿದಂತೆ ವಿವಿಧ ಘಟಕಗಳಿಗೆ ಸೇರಿದ ಸುಮಾರು 24,000 ಭದ್ರತಾ ಸಿಬ್ಬಂದಿಯನ್ನು ಒಳಗೊಂಡಿದೆ.
ಮಾವೋವಾದಿಗಳ ಪ್ರಬಲ ಮಿಲಿಟರಿ ರಚನೆಯಾದ ಬೆಟಾಲಿಯನ್‌ ಸಂಖ್ಯೆ 1 ರ ಹಿರಿಯ ಕಾರ್ಯಕರ್ತರು ಮತ್ತು ತೆಲಂಗಾಣ ರಾಜ್ಯ ಸಮಿತಿಯ ಉಪಸ್ಥಿತಿಯ ಬಗ್ಗೆ ಮಾಹಿತಿಯ ಆಧಾರದ ಮೇಲೆ ಏಪ್ರಿಲ್‌ 21 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!