ಉದಯವಾಹಿನಿ, ಮುಂಬೈ: ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಆಪರೇಷನ್ ಸಿಂದೂರ್ ಈಗ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಟ್ರೆಂಡಿಂಗ್ ಆಗುತ್ತಿದ್ದು, ಗುರುವಾರ ರಿಲಯನ್ಸ್ ಇಂಡಸ್ಟ್ರೀಸ್ ‘ಆಪರೇಷನ್ ಸಿಂಧೂರ್’ ಹೆಸರಿನ ಟ್ರೇಡ್‌ಮಾರ್ಕ್ ಹಕ್ಕಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದೆ.ಜಿಯೋ ಸ್ಟುಡಿಯೋಸ್ ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರಿಯ ಅಧಿಕೃತ ಪ್ರಕಟಣೆ ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಒಂದು ಘಟಕವಾದ ಜಿಯೋ ಸ್ಟುಡಿಯೋಸ್, ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದೆ, ಈ ಅರ್ಜಿಯನ್ನು ಕಿರಿಯ ಉದ್ಯೋಗಿಯೊಬ್ಬರು ಯಾವುದೇ ಅನುಮತಿಯಿಲ್ಲದೆ ಆಕಸ್ಮಿಕವಾಗಿ ಸಲ್ಲಿಸಿದ್ದರು” ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸ್ಪಷ್ಟಪಡಿಸಿದೆ.
‘ಆಪರೇಷನ್ ಸಿಂಧೂರ್’ ಎಂಬ ಹೆಸರಿನ ಟ್ರೇಡ್‌ಮಾರ್ಕ್ ಹಕ್ಕನ್ನು ಹೊಂದುವ ಉದ್ದೇಶ ನಮಗೆ ಇಲ್ಲ. ಈ ಪದಗುಚ್ಛವು ಈಗ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿದ್ದು, ಭಾರತೀಯ ಶೌರ್ಯದ ಸಂಕೇತವಾಗಿದೆ ಎಂದು ರಿಲಯನ್ಸ್ ಹೇಳಿದೆ.
“ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂಧೂರ್ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಎಲ್ಲಾ ಪಾಲುದಾರರು ತುಂಬಾ ಹೆಮ್ಮೆಪಡುತ್ತಾರೆ. ಭಯೋತ್ಪಾದನೆಯ ದುಷ್ಟತನದ ವಿರುದ್ಧ ಭಾರತದ ರಾಜಿಯಾಗದ ಹೋರಾಟದಲ್ಲಿ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಹೆಮ್ಮೆಯ ಸಾಧನೆ ಆಪರೇಷನ್ ಸಿಂಧೂರ್ ಆಗಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ರಿಲಯನ್ಸ್ ನಮ್ಮ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದೆ. ‘ಭಾರತ ಮೊದಲು’ ಎಂಬ ಧ್ಯೇಯವಾಕ್ಯಕ್ಕೆ ನಮ್ಮ ಬದ್ಧತೆ ಅಚಲವಾಗಿದೆ” ಎಂದು ಹೇಳಿದೆ.
