ಉದಯವಾಹಿನಿ,ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರದಲ್ಲಿ ನೇರವಾದ ರಸ್ತೆಗಳು ಸಿಗೋದೇ ಕಷ್ಟ. ಯಾರ ಅಂಕೆಗೂ ಸಿಗದ ಅವೈಜ್ಞಾನಿಕ ಅಭಿವೃದ್ಧಿ ಹಾಗೂ ಯೋಜನಾಬದ್ಧವಾಗಿ ಕಟ್ಟಡಗಳು ನಿರ್ಮಾಣವಾಗದ ಕಾರಣ, ಬೆಂಗಳೂರಿನಲ್ಲಿ ಅಂಕು ಡೊಂಕಿನ ರಸ್ತೆಗಳೇ ಹೆಚ್ಚು. ಆದ್ರೆ, ಈ ಅಂಕು ಡೊಂಕಿನ ರಸ್ತೆಗಳಿಗೆ ಹೋಲಿಸಿದರೆ, ನೇರವಾಗಿರುವ ರಸ್ತೆಗಳಲ್ಲೇ ಅಪಘಾತಗಳು ಹೆಚ್ಚು ಅನ್ನೋ ಅಚ್ಚರಿಯ ಹಾಗೂ ಆಘಾತಕಾರಿ ಮಾಹಿತಿ ಅಂಕಿ ಅಂಶಗಳಿಂದ ಲಭ್ಯವಾಗಿದೆ! ಬೆಂಗಳೂರು ಮಹಾ ನಗರದಲ್ಲಿ ಸಂಭವಿಸುವ ಅಪಘಾತಗಳ ಪೈಕಿ ನೇರವಾದ ರಸ್ತೆಗಳಲ್ಲೇ ಶೇ. 75ಕ್ಕೂ ಹೆಚ್ಚು ಪ್ರಮಾಣದ ಅಪಘಾತಗಳು ಸಂಭವಿಸುತ್ತವೆ ಅನ್ನೋ ವಿಚಾರ ಬೆಂಗಳೂರು ನಗರ ಸಂಚಾರಿ ಪೊಲೀಸರ ಬಳಿ ಇರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಟಿ ಜಂಕ್ಷನ್‌ಗಳಲ್ಲಿ ಶೇ. 4.9ರಷ್ಟು ಅಪಘಾತಗಳು ಸಂಭವಿಸಿದರೆ, ವೈ ಜಂಕ್ಷನ್‌ಗಳಲ್ಲಿ ಶೇ. 0.79ರಷ್ಟು ಅಪಘಾತಗಳು ಸಂಭವಿಸಿವೆ. ಏಕೆ ಹೀಗೆ ಎಂದು ಪ್ರಶ್ನೆ ಮಾಡಿದರೆ, ಟ್ರಾಫಿಕ್ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಬೆಂಗಳೂರು ಮಹಾ ನಗರ ಮಾತ್ರವಲ್ಲ, ರಾಷ್ಟ್ರವ್ಯಾಪಿ ಇದೇ ಪರಿಸ್ಥಿತಿ ಇದೆ ಎನ್ನುತ್ತಾರೆ, ಪೊಲೀಸರು. ಎಲ್ಲ ಕಡೆಗಳಲ್ಲೂ ನೇರವಾದ ರಸ್ತೆಗಳಲ್ಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಏಕೆಂದರೆ, ತಿರುವುಗಳು ಇರುವ ಅಂಕು ಡೊಂಕಿನ ರಸ್ತೆಗಳಲ್ಲಿ ಹಾಗೂ ಜಂಕ್ಷನ್‌ಗಳಲ್ಲಿ ವಾಹನ ಸವಾರರು ಹೆಚ್ಚು ಜಾಗೃತರಾಗಿ ವಾಹನ ಚಲಾಯಿಸುತ್ತಾರೆ. ಆದರೆ, ನೇರವಾಗಿ ಇರುವ ರಸ್ತೆಗಳಲ್ಲಿ ವಾಹನಗಳ ವೇಗ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಸಡನ್ ಆಗಿ ಅಡ್ಡ ಬರುವ ವಾಹನಗಳು ಹಾಗೂ ಪ್ರಮುಖವಾಗಿ ಪಾದಚಾರಿಗಳು ವಾಹನಗಳಿಗೆ ಸಿಲುಕುವ ಅಪಾಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅವರು ವಿವರಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!