ಉದಯವಾಹಿನಿ,ಬುಲಂದ್‌ಶೆಹರ್: ಇಸ್ಲಾಂ ಧರ್ಮೀಯ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿ ಆತನಿಂದ ಬಲವಂತವಾಗಿ ‘ಜೈ ಶ್ರೀರಾಮ್’ ಎಂದು ಹೇಳಿಸಿದ ಘಟನೆ ಉತ್ತರ ಪ್ರದೇಶ ರಾಜ್ಯದ ಬುಲಂದ್‌ಶೆಹರ್‌ನಲ್ಲಿ ನಡೆದಿದೆ. ಸಹೀಲ್ ಎಂಬಾತ ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದು, ಆತನ ವಿರುದ್ಧ ಕಳ್ಳತನ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವನಿಗೆ ಅವಮಾನ ಮಾಡಿ ಪಾಠ ಕಲಿಸಲು ಮುಂದಾದ ಜನರು ಆತನನ್ನು ಮರಕ್ಕೆ ಕಟ್ಟಿ ಹಾಕಿ ತಲೆಯನ್ನು ಬೋಳಿಸಿ ಆತನಿಂದ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಸಿದ್ದಾರೆ. ಬಳಿಕ ಕಳ್ಳತನ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು ಎಂದು ತಿಳಿದು ಬಂದಿದೆ. ಘಟನೆಯ ವಿಡಿಯೋ ತಡವಾಗಿ ಬೆಳಕಿಗೆ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತ ಸಹೀಲ್‌ನ ತಂದೆ ಶಕೀಲ್ ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನನ್ನ ಮಗನನ್ನು ಈ ಘಟನೆ ಬಳಿಕ ಜೈಲಿಗೆ ಹಾಕಲಾಗಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಘಟನೆ ಕುರಿತಂತೆ ಯಾರಿಗೂ ಹೇಳಬೇಡ ಎಂದು ಪೊಲೀಸರು ನನ್ನ ಮಗನಿಗೆ ಬೆದರಿಕೆ ಹಾಕಿದ್ದರು ಎಂದೂ ಶಕೀಲ್ ಆರೋಪ ಮಾಡಿದ್ದಾರೆ.
