ಉದಯವಾಹಿನಿ,ಉತ್ತರಕಾಶಿ: ‘ಪತ್ರಕರ್ತ’, ಹಿಂದುತ್ವ ಸಂಘಟನೆಗಳು ಅಪಹರಣ ಪ್ರಕರಣವನ್ನು ‘ಲವ್ ಜಿಹಾದ್’ಗೆ ತಿರುಗಿಸಿದ್ದು ಹೇಗೆ? . ಕಳೆದ ತಿಂಗಳು 14 ವರ್ಷದ ಹಿಂದೂ ಬಾಲಕಿಯನ್ನು ಇಬ್ಬರು ವ್ಯಕ್ತಿಗಳು ಅಪಹರಿಸಲು ಪ್ರಯತ್ನಿಸಿದರು ಎಂಬ ಆರೋಪದಿಂದ ಉತ್ತರಕಾಶಿಯ ಪುರೋಲಾ ಪಟ್ಟಣದಲ್ಲಿ ಕೋಮು ಉದ್ವಿಗ್ನತೆಗಳು ಉದ್ಭವಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 26ರಂದು ಜಿತೇಂದ್ರ ಸೈನಿ ಮತ್ತು ಉಬೇದ್ ಖಾನ್ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಆ ನಂತರ, ಸ್ಥಳೀಯ ಹಿಂದುತ್ವ ಗುಂಪುಗಳು ಇದು “ಲವ್ ಜಿಹಾದ್” ಪ್ರಕರಣ ಎಂದು ಆರೋಪಿಸಿದರು. ಹಿಂದುತ್ವ ಗುಂಪುಗಳು ರ್ಯಾಲಿಯನ್ನು ಮುನ್ನಡೆಸಿ, ಅಂಗಡಿಗಳನ್ನು ಧ್ವಂಸ ಮಾಡಿದರು ಮತ್ತು ಮುಸ್ಲಿಂ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಲಾಯಿತು. ಆನಂತರ ಕನಿಷ್ಠ 41 ಮುಸ್ಲಿಂ ಕುಟುಂಬಗಳು ಪಟ್ಟಣವನ್ನು ತೊರೆದಿದ್ದಾರೆ. ಹಿಂದುತ್ವ ಸಂಘಟನೆಗಳು ಉದ್ದೇಶಪೂರ್ವಕವಾಗಿ ಘಟನೆಗೆ “ಕೋಮು ಬಣ್ಣ” ನೀಡಿ “ಲವ್ ಜಿಹಾದ್” ಎಂದು ಹೇಳಿಕೊಂಡಿವೆ ಎಂದು ಅಪ್ರಾಪ್ತ ಬಾಲಕಿಯ ಮಾವ ರಾಕೇಶ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಮೊದಲು “ಲವ್ ಜಿಹಾದ್” ದೃಷ್ಟಿಕೋನ ನೀಡಿದ್ದು “ಸ್ಥಳೀಯ ಪತ್ರಕರ್ತ” ಎಂದು ರಾಕೇಶ್ ದೂಷಿಸಿದ್ದಾರೆ. ತನ್ನ ಸೊಸೆ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ “ನಕಲಿ ದೂರು” ದಾಖಲಿಸುವಂತೆ ಈ ಪತ್ರಕರ್ತ ಒತ್ತಾಯಿಸಿದ್ದನು. ಈ ಆರೋಪದ ನಕಲಿ ದೂರಿನಲ್ಲಿ ಖಾನ್ ಮಾತ್ರ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ, ಮತ್ತೋರ್ವ ಆರೋಪಿ ಸೈನಿ ಅಲ್ಲ ಹೆಸರು ಕೈಬಿಡಲಾಗಿದೆ” ಎಂದು ಹೇಳಿದರು.
