ಉದಯವಾಹಿನಿ, ಹಾನಗಲ್ : ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಸೃಷ್ಠಿಸಿರುವ ಅವಾಂತರದಿಂದ ತಾಲ್ಲೂಕಿನ ಮಂತಗಿ ರಸ್ತೆಯಲ್ಲಿ ಸಂಚಾರ ದುರಸ್ತರವಾಗಿದ್ದು, ಇದರಿಂದ ನಿತ್ಯ ಸಣ್ಣಪುಟ್ಟ ಅಪಘಾತಗಳು ಇಲ್ಲಿ ಸಂಭವಿಸುತ್ತಿವೆ. ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗುತ್ತಿದೆ.
ಮಳಗಿಯ ಧರ್ಮಾ ಜಲಾಶಯದಿಂದ ಹಾನಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಯೋಜನೆ ಅಡಿಯಲ್ಲಿ ಪೈಪ್‌ಲೈನ್ ಅಳವಡಿಕೆ ನಡೆಯುತ್ತಿದ್ದು, ಹಾನಗಲ್‌ನ ಆನಿಕೆರೆ ಸಮೀಪದಿಂದ ಮಂತಗಿ ಗ್ರಾಮದ ತನಕ ರಸ್ತೆಯ ಒಂದು ಬದಿಯಲ್ಲಿ ಮಣ್ಣ ಅಗೆದು ಪೈಪ್ ಅಳವಡಿಸಲಾಗಿದೆ. ರಸ್ತೆಯ ಅಂಚಿಗೆ ಹೊಂದಿಕೊಂಡು ಮಣ್ಣು ಅಗೆದ ಕಾರಣ ಗುಂಡಿಗಳು ಈಗಲೂ ಬಾಯ್ದೆರೆದುಕೊಂಡಿವೆ.
ಪೈಪ್ ಮೇಲೆ ಹರಡಿರುವ ಮಣ್ಣು ಅಲ್ಲಲ್ಲಿ ಸಡಿಲಗೊಂಡು ಮಳೆಗೆ ರಾಡಿಯಾಗಿ ವಾಹನಗಳ ಸಂಚಾರಕ್ಕೆ ಸಂಚಕಾರ ತರುತ್ತಿದೆ. ಕಿರಿದಾದ ಈ ಗ್ರಾಮೀಣ ರಸ್ತೆಯಲ್ಲಿ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವಾಗ ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡು ಫಜೀತಿ ಆಗುತ್ತಿದೆ. ಕೆಲವು ದಿನಗಳಿಂದ ಈ ರಸ್ತೆಯಲ್ಲಿ ಬಸ್, ಕಾರು, ಟ್ರ್ಯಾಕ್ಟರ್‌ಗಳು ಪಲ್ಟಿಯಾಗಿವೆ. ಕೆಲವು ವಾಹನಗಳು ಕೆಸರಿನಲ್ಲಿ ಸಿಲುಕಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಅಡಿಕೆ ಸಸಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮಣ್ಣಿನಲ್ಲಿ ಸಿಕ್ಕಿಕೊಂಡಿತ್ತು. ಜೆಸಿಬಿ ಬಳಸಿ ಟ್ರ್ಯಾಕ್ಟರ್ ಹೊರಗೆ ತೆಗೆಯಲಾಗಿದೆ. ಇದು ಮಲೆನಾಡಿನ ಹಲವಾರು ಗ್ರಾಮಗಳ ಸಂಪರ್ಕದ ಪ್ರಮುಖ ಮಾರ್ಗವಾಗಿದೆ.
