ಉದಯವಾಹಿನಿ, ಈಗಂತೂ ಜನರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಕೆಲವರು ಮೊಡವೆಗಳಿಂದ ತೊಂದರೆಗೊಳಗಾಗುತ್ತಾರೆ. ಮತ್ತೆ ಕೆಲವರು ಮುಖದ ಮೇಲೆ ಕಪ್ಪು ಕಲೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳನ್ನು ತೊಡೆದು ಹಾಕಲು ಹಲವು ಜನರು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಇವುಗಳ ರಾಸಾಯನಿಕ ಅಂಶದಿಂದ ಅಪೇಕ್ಷಿತ ಫಲಿತಾಂಶಗಳು ಲಭಿಸುವುದಿಲ್ಲ. ಆರೋಗ್ಯ ತಜ್ಞರು ತಿಳಿಸುವ ಪ್ರಕಾರ, ಮನೆಮದ್ದುಗಳು ಅತ್ಯಂತ ಪ್ರಯೋಜನಕಾರಿಯಾಗಿವೆ. ದಾಳಿಂಬೆ ರಸದಿಂದ ತಯಾರಿಸಬಹುದಾದ ಫೇಸ್ ಪ್ಯಾಕ್ ಕುರಿತು ಇಂದು ತಿಳಿಯೋಣ.
ದಾಳಿಂಬೆ ರಸದಿಂದ ಸ್ವಚ್ಛಗೊಳಿಸಿ: ಫೇಶಿಯಲ್‌ಗಾಗಿ ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಬೇಕು. ಇದಕ್ಕಾಗಿ ದಾಳಿಂಬೆ ರಸದೊಂದಿಗೆ ಒಣ ಹಾಲಿನ ಪುಡಿ ಬೆರೆಸಿ ಹಾಗೂ ಕ್ಲೆನ್ಸರ್ ತಯಾರಿಸಿ. ಈ ಕ್ಲೆನ್ಸರ್ನಿಂದ ಮುಖವನ್ನು ಮಸಾಜ್ ಮಾಡಿ, ಬಳಿಕ 2ರಿಂದ 3 ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದು ಯಾವುದೇ ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದರಿಂದ ನಿಮ್ಮ ತ್ವಚೆ ಮೃದುವಾಗುತ್ತದೆ.
ದಾಳಿಂಬೆ ರಸದಿಂದ ಸ್ಕ್ರಬ್ ಮಾಡಿ: ಫೇಶಿಯಲ್ನ ಎರಡನೇ ಹಂತವೆಂದರೆ ಸ್ಕ್ರಬ್ಬಿಂಗ್. ಇದಕ್ಕಾಗಿ ಅಕ್ಕಿ ಹಿಟ್ಟು ಮತ್ತು ಜೇನುತುಪ್ಪವನ್ನು ದಾಳಿಂಬೆ ರಸದೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ನಿಂದ ಮುಖವನ್ನು ಸ್ಕ್ರಬ್ ಮಾಡಿ. ಇದು ಸತ್ತ ಚರ್ಮದ ಕೋಶಗಳು, ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಸುಲಭವಾಗಿ ತೆಗೆದುಹಾಕುತ್ತದೆ. ಚರ್ಮ ಹೆಚ್ಚು ಸೂಕ್ಷ್ಮವಾಗಿದ್ದರೆ, ನೀವು ಅಕ್ಕಿ ಹಿಟ್ಟಿನ ಬದಲಿಗೆ ಓಟ್ ಪೌಡರ್ ಉಪಯೋಗಿಬಹುದು.
ಫೇಸ್ ಪ್ಯಾಕ್ ಸಿದ್ಧಪಡಿಸೋದು ಹೇಗೆ?: ಫೇಶಿಯಲ್ನ ಮೂರನೇ ಹಂತದಲ್ಲಿ ಫೇಸ್ ಪ್ಯಾಕ್ ತಯಾರಿಸಬೇಕಾಗುತ್ತದೆ. ಇದನ್ನು ಮಾಡಲು ದಾಳಿಂಬೆ ರಸಕ್ಕೆ ಕಡಲೆ ಹಿಟ್ಟು ಮತ್ತು ಒಣ ಹಾಲಿನ ಪುಡಿ ಸೇರಿಸಿ ಮಿಶ್ರಣವನ್ನು ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಬ್ರಷ್‌ನಿಂದ ಹಚ್ಚಿ, ನಂತರ ಅದನ್ನು ಟಿಶ್ಯೂ ಪದರದಿಂದ ಮುಚ್ಚಿ. ಇದೀಗ ಟಿಶ್ಯೂ ಮೇಲೆ ತಯಾರಾದ ಫೇಸ್ ಪ್ಯಾಕ್ ತೆಳುವಾದ ಪದರವನ್ನು ಹಚ್ಚಿ. 30 ನಿಮಿಷಗಳ ಬಳಿಕ ಫೇಸ್ ಪ್ಯಾಕ್ ತೆಗೆದು ನಿಮ್ಮ ಮುಖ ತೊಳೆಯಿರಿ. ಇದರಿಂದ ಮುಖವನ್ನು ಚಂದ್ರನಂತೆ ಫಳ ಫಳ ಹೊಳೆಯುವಂತೆ ಮಾಡುತ್ತದೆ ಎಂದು ಸೌಂದರ್ಯ ತಜ್ಞರು ತಿಳಿಸುತ್ತಾರೆ.
