ಉದಯವಾಹಿನಿ, ವರ್ಷದ ಮೊದಲ ಹಬ್ಬವೇ ಮಕರ ಸಂಕ್ರಾಂತಿ. ಈ ಹಬ್ಬವನ್ನು ದೇಶದೆಲ್ಲೆಡೆ ಜನ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ. ಸಂಕ್ರಾಂತಿ ಹಬ್ಬದಲ್ಲಿ ಪೊಂಗಲ್ ವಿಶೇಷ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಂಪಲ್ ಆಗಿ ಸಿಹಿ ಪೊಂಗಲ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ನೀವೂ ಕೂಡ ಹಬ್ಬದ ದಿನ ನಿಮ್ಮ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು:ಅಕ್ಕಿ – 1 ಕಪ್ , ಹೆಸರುಬೇಳೆ – 1 ಕಪ್ , ಬೆಲ್ಲ – ಒಂದೂವರೆ ಕಪ್
ಒಣದ್ರಾಕ್ಷಿ – 10 , ಗೋಡಂಬಿ – 10 , ಲವಂಗ – 1 ಏಲಕ್ಕಿ ಪುಡಿ – ಕಾಲು ಚಮಚ
ತುಪ್ಪ- ಕಾಲು ಚಮಚ, ಖಾದ್ಯ ಕರ್ಪೂರ / ಪಚ್ಚೆ ಕರ್ಪೂರ – ಸಣ್ಣ ಪೀಸ್
ಕಾಯಿತುರಿ – ಕಾಲು ಕಪ್
* ಮೊದಲಿಗೆ ಅಕ್ಕಿ ಹಾಗೂ ಹೆಸರು ಬೇಳೆಯನ್ನು ತೊಳೆದು ಕುಕ್ಕರ್‌ಗೆ ಹಾಕಿ 3 ಕಪ್ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ, 4-5 ಸೀಟಿ ಕೂಗಿಸಿಕೊಳ್ಳಿ.
* ನಂತರ ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ, ಸ್ಟವ್ ಮೇಲಿಟ್ಟು ಕುದಿಯಲು ಬಿಡಿ. ಜೊತೆಗೆ ಇದೇ ವೇಳೆ ಸಣ್ಣ ಪೀಸ್ ಕರ್ಪೂರ ಹಾಕಿ. ಈಗ ಬೆಲ್ಲ ಹಾಗೂ ಕರ್ಪೂರ ಕರಗಿದ ಬಳಿಕ ಈ ಪಾಕವನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಂಡಿರುವ ಅನ್ನ ಮತ್ತು ಬೇಳೆಯೊಂದಿಗೆ ಮಿಶ್ರಣ ಮಾಡಿ.
* ಈಗ ಕಾಯಿತುರಿ, ಏಲಕ್ಕಿ ಪುಡಿ, 1 ಕಪ್ ಹಾಲು ಸೇರಿಸಿ. ಇದೇ ಸಮಯದಲ್ಲಿ ಮತ್ತೊಂದೆಡೆ ಬಾಣಲೆಯನ್ನು ಸ್ಟವ್ ಮೇಲಿಟ್ಟು ತುಪ್ಪ ಹಾಕಿ, ಅದು ಕಾದ ಬಳಿಕ ಗೋಡಂಬಿ, ದ್ರಾಕ್ಷಿ ಹಾಕಿ ಕೆಂಪಗಾಗುವವರೆಗೂ ಹುರಿಯಿರಿ.
* ಈಗ ಇವೆಲ್ಲವನ್ನೂ ಅನ್ನಕ್ಕೆ ಬೆರಸಿ, 5 ನಿಮಿಷಗಳ ಕಾಲ ಬೇಯಿಸಿ.
* ನಂತರ ಇದನ್ನು ಸರ್ವಿಂಗ್ ಪ್ಲೇಟ್‌ಗೆ ಹಾಕಿ ಸವಿಯಲು ಕೊಡಿ.
