ಉದಯವಾಹಿನಿ,ಹೊಸದಿಲ್ಲಿ: ಒಡಿಶಾದಲ್ಲಿ 291 ಜನರನ್ನು ಬಲಿ ಪಡೆದುಕೊಂಡ ಭೀಕರ ರೈಲು ಅಪಘಾತ ಸಂಭವಿಸಿ ಎರಡು ವಾರಕ್ಕೂ ಹೆಚ್ಚು ಸಮಯ ಕಳೆದಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಯಶವಂತಪುರ- ಹೌರಾ ರೈಲಿಗೆ ಡಿಕ್ಕಿ ಹೊಡೆದ ಭಯಾನಕ ದುರಂತ ಸಂಭವಿಸಿದ್ದಾಗ ಕೋರಮಂಡಲ್ ರೈಲನ್ನು ಚಲಾಯಿಸುತ್ತಿದ್ದ ಲೋಕೋ ಪೈಲಟ್ ಸ್ಥಿತಿ ಈಗ ಹೇಗಿದೆ? ಈ ದುರ್ಘಟನೆಯಲ್ಲಿ ಲೋಕೋ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದಷ್ಟೇ ಅವರ ಕುಟುಂಬಕ್ಕೆ ಗೊತ್ತಿರುವ ಸಂಗತಿ. ಆದರೆ ಅವರು ಎಲ್ಲಿದ್ದಾರೆ? ಅವರ ಸ್ಥಿತಿ ಹೇಗಿದೆ ಎನ್ನುವುದು ಅವರಿಗೆ ಇನ್ನೂ ಗೊತ್ತಿಲ್ಲ. ಏಕೆಂದರೆ ಅವರನ್ನು ಭೇಟಿ ಮಾಡಲು ಕುಟುಂಬದವರಿಗೆ ಈವರೆಗೂ ಅನುಮತಿ ನೀಡಿಲ್ಲ.
ಚೆನ್ನೈ ಕಡೆಗೆ ಪ್ರಯಾಣಿಸುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು, ಜೂನ್ 2ರ ಸಂಜೆ ಬಾಲಸೋರ್ ಜಿಲ್ಲೆಯ ಬಹಾನಗ ಬಜಾರ್ ರೈಲ್ವೆ ನಿಲ್ದಾಣದ ಮಾರ್ಗದಲ್ಲಿ ನಿಂತಿದ್ದ, ಕಬ್ಬಿಣದ ಅದಿರು ತುಂಬಿದ್ದ ಸರಕು ಸಾಗಣೆ ರೈಲಿಗೆ ಮೊದಲು ಡಿಕ್ಕಿ ಹೊಡೆದಿತ್ತು. ಆಗ ಲೋಕೋ ಪೈಲಟ್ 49 ವರ್ಷದ ಗುಣನಿಧಿ ಮೊಹಾಂತಿ ಹಾಗೂ ಅವರ ಜತೆ 36 ವರ್ಷದ ಸಹಾಯಕ ಲೋಕೋ ಪೈಲಟ್ ಹಜಾರಿ ಕುಮಾರ್ ಬೆಹೆರಾ ರೈಲು ಚಾಲನೆ ಮಾಡುತ್ತಿದ್ದರು. 128 ಕಿಮೀ ವೇಗದಲ್ಲಿದ್ದ ಕೋರಮಂಡಲ್ ರೈಲು, ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ರಭಸಕ್ಕೆ ಆ ರೈಲಿನ ಮೇಲೆ ಮುಂದಿನ ಬೋಗಿ ಹತ್ತಿತ್ತು. ಈ ಭೀಕರ ಅವಘಡದಲ್ಲಿ ಗುಣನಿಧಿ ಹಾಗೂ ಬೆಹೆರಾ ಅವರ ತಲೆ, ಎದೆ ಮತ್ತು ಹಿಂಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಅವರಿಬ್ಬರನ್ನೂ ಮೊದಲು ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ಮೂಳೆಗಳ ಮುರಿತ, ತಲೆಗೆ ಹಲವು ಗಾಯಗಳಾಗಿದ್ದ ಗುಣನಿಧಿ ಮತ್ತು ಬೆಹೆರಾ ಅವರನ್ನು ಮೊದಲ 10 ದಿನ ರಾಜ್ಯ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳ ಕಟ್ಟುನಿಟ್ಟಿನ ನಿಗಾವಣೆಯಲ್ಲಿ ಇರಿಸಲಾಗಿತ್ತು. ಆದರೆ ನಾಲ್ಕು ದಿನಗಳ ಹಿಂದೆ ಗುಣನಿಧಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
