ಉದಯವಾಹಿನಿ,ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗೂ ಮುನ್ನ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಪ್ರಯತ್ನ ಶುರುವಾಗಿದೆ. ಈಗಾಗಲೇ 22ನೇ ಕಾನೂನು ಆಯೋಗವು ಯುಸಿಸಿ ಸಂಬಂಧ ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವುದನ್ನು ಆರಂಭಿಸಿದೆ. ಏಕರೂಪ ನಾಗರಿಕ ಸಂಹಿತೆಯನ್ನು ನಾವು ವಿರೋಧಿಸುತ್ತೇವೆ. ಆದರೆ ಅದಕ್ಕಾಗಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುವುದಿಲ್ಲ ಎಂದು ಜಮಿಯತ್ ಮುಖ್ಯಸ್ಥ ಅರ್ಷದ್ ಮದನಿ ಹೇಳಿದ್ದಾರೆ. “ಕಳೆದ 1300 ವರ್ಷಗಳಿಂದ ನಾವು ನಮ್ಮದೇ ವೈಯಕ್ತಿಕ ಕಾನೂನು ಹೊಂದಿದ್ದೇವೆ. ನಾವು ಅದಕ್ಕೆ ಅಂಟಿಕೊಂಡಿರುತ್ತೇವೆ. ಆದರೆ ಯುಸಿಸಿ ವಿರುದ್ಧ ಪ್ರತಿಭಟಿಸಲು ಬೀದಿಗೆ ಇಳಿಯಲು ನಾವು ಬಯಸುವುದಿಲ್ಲ.
ಸ್ವಾತಂತ್ರ್ಯಾನಂತರ ಯಾವ ಸರ್ಕಾರವೂ ಇದನ್ನು ಮಾಡಿರಲಿಲ್ಲ. ಹಾಗೆಯೇ ಅದರ ಅಗತ್ಯ ಇಲ್ಲ ಎನ್ನುವುದು ನಮ್ಮ ನಂಬಿಕೆ. ಪ್ರತಿಭಟನೆಗಳು ಹೆಚ್ಚಾದಷ್ಟೂ ಹಿಂದೂ ಮತ್ತು ಮುಸ್ಲಿಮರ ನಡುವಿನ ಅಂತರ ಹೆಚ್ಚಾಗಲಿದೆ. ಇದರೊಂದಿಗೆ ಕೆಟ್ಟ ಉದ್ದೇಶ ಹೊಂದಿರುವ ಜನರ ಗುರಿ ಈಡೇರುತ್ತದೆ” ಎಂದು ಮದನಿ ಭಾನುವಾರ ತಿಳಿಸಿದ್ದಾರೆ. “ಯುಸಿಸಿ ಅನುಷ್ಠಾನಕ್ಕೆ ತರುವುದು ಬಿಜೆಪಿಗೆ ಚುನಾವಣೆ ಗೆಲ್ಲಲು ಇರುವ ಒಂದು ಸಾಧನ ಮಾತ್ರ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಏಕರೂಪ ನಾಗರಿಕ ಕಾನೂನನ್ನು ಅನಗತ್ಯವಾದ, ಅಪ್ರಾಯೋಗಿಕವಾದ ಹಾಗೂ ದೇಶಕ್ಕೆ ಬಹಳ ಅಪಾಯಕಾರಿಯಾದ ಕಾನೂನು ಎಂದು ಪರಿಗಣಿಸಿದೆ” ಎಂದು ಇತ್ತೆಹಾದ್- ಇ- ಮಿಲ್ಲತ್ ಕೌನ್ಸಿಲ್ ಅಧ್ಯಕ್ಷ ಮೌಲಾನಾ ತಾಖೀರ್ ರಾಜಾ ಖಾನ್ ಹೇಳಿದ್ದಾರೆ.
