ಉದಯವಾಹಿನಿ, ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್‌‍ ಹೈಕಮಾಂಡ್‌ನ ಬಲಾ-ಬಲವನ್ನು ಪರೀಕ್ಷೆ ಒಳಪಡಿಸಲಿದ್ದು, ಸಹಜವಾಗಿಯೇ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸುರ್ಜೇವಾಲ ನಡೆಸುತ್ತಿರುವ ಸರಣಿ ಸಭೆಗಳು ತೀವ್ರ ಕುತೂಹಲ ಕೆರಳಿಸಿವೆ. ಸಚಿವ ಸಂಪುಟ ಪುನರ್‌ ರಚನೆ, ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಈವರೆಗೂ ಹೈಕಮಾಂಡ್‌ನ ಪ್ರಭಾವ ಎದ್ದುಕಾಣುತ್ತಿದೆ.
ಒಂದು ವೇಳೆ ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಿದ್ದಾದರೆ ಸಿದ್ದರಾಮಯ್ಯ ಅವರು ಹೆಚ್ಚು ಪ್ರಭಾವಿಯಾಗಲಿದ್ದು, ಡಿ.ಕೆ. ಶಿವಕುಮಾರ್‌ ಬಣಕ್ಕೆ ಮತ್ತಷ್ಟು ಹಿನ್ನಡೆಯಾಗುವ ನಿರೀಕ್ಷೆಯಿದೆ.ರಾಷ್ಟ್ರ ರಾಜಕಾರಣದ ನಾಯಕತ್ವದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿಯೇ ಹೈಕಮಾಂಡ್‌ ಎಂಬ ರೀತಿ ಬಿಂಬಿತವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೆಪ ಮಾತ್ರಕ್ಕೆ ಅಧ್ಯಕ್ಷರು ಎಂಬಂತೆ ರಾಜ್ಯದಲ್ಲಿ ಕೆಲ ನಾಯಕರು ವರ್ತಿಸುತ್ತಿದ್ದಾರೆ.
ನಾಯಕತ್ವದ ಕುರಿತು ಚರ್ಚೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಮಲ್ಲಿಕಾರ್ಜುನ್‌ ಖರ್ಗೆಯವರೇ ಹೇಳಿಕೆ ನೀಡಿದ ಬಳಿಕವೂ, ಪದೇಪದೇ ಬೆಂಕಿ ಬಿರುಗಾಳಿಯಂಥ ಮಾತುಗಳನ್ನಾಡುತ್ತಾ ಸರ್ಕಾರ ಮತ್ತು ಪಕ್ಷದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಲೇ ಇದ್ದಾರೆ. ಅಂಥವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್‌‍ನ ಹಿರಿಯ ನಾಯಕರು ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!