ಉದಯವಾಹಿನಿ, ಚಾಂಗ್ಡೆ, ಹುನಾನ್: ಚೀನಾದ ಹುನಾನ್ ಪ್ರಾಂತ್ಯದ ತಾವೊಯುವಾನ್ ಕೌಂಟಿಯ ಶುವಾಂಗ್‌ಕ್ಸಿಕೌ ಟೌನ್‌ನ ಓರ್ವ ವ್ಯಕ್ತಿಯು ತನ್ನ 70 ವರ್ಷದ ಜೀವಂತ ತಾಯಿಗಾಗಿ ಶವಪೆಟ್ಟಿಗೆ ಖರೀದಿದ್ದಾನೆ. 16 ಜನರನ್ನು ಒಟ್ಟಿಗೆ ಸೇರಿಸಿ ಅಂಗಡಿಯಿಂದ ಮನೆಗೆ ಶವಪೆಟ್ಟಿಗೆಯನ್ನು ತೆಗೆದುಕೊಂಡು ಹೋದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕಾರ್ಯವು ತಾಯಿಗೆ ದೀರ್ಘಾಯುಷ್ಯ ಮತ್ತು ಸೌಭಾಗ್ಯ ತಂದುಕೊಡುತ್ತದೆ ಎಂಬ ನಂಬಿಕೆ ಅವರಲ್ಲಿದೆ.
ಚೀನಾದ ಸಾಮಾಜಿಕ ಜಾಲತಾಣ ಡೌಯಿನ್‌ನಲ್ಲಿ ಈ ಘಟನೆಯ ವಿಡಿಯೊ ವೈರಲ್ ಆಗಿದೆ ವರದಿ ಪ್ರಕಾರ, ವೃದ್ಧೆ ಶವಪೆಟ್ಟಿಗೆಯೊಳಗೆ ಕುಳಿತು ಕೈಯಲ್ಲಿ ಬೀಸಣಿಗೆ ಹಿಡಿದುಕೊಂಡು ಖುಷಿಯಿಂದ ಕಾಣಿಸಿಕೊಂಡಿದ್ದಾರೆ. 16 ಜನರು ಶವಪೆಟ್ಟಿಗೆಯನ್ನು ಮೆರವಣಿಗೆಯಲ್ಲಿ ಒಯ್ದಿದ್ದಾರೆ. ಮೆರವಣಿಗೆಗೆ ಮುಂಚಿತವಾಗಿ ವಾದ್ಯಗೋಷ್ಠಿಯೊಂದು ಸಂಗೀತ ನುಡಿಸಿತು, ಇದು ಸಾಕಷ್ಟು ಜನರನ್ನು ಆಕರ್ಷಿಸಿದೆ. ಮನೆಗೆ ತಲುಪಿದ ಬಳಿಕ, ಧೂಪ ಮತ್ತು ಕಾಣಿಕೆಗಳೊಂದಿಗೆ ಸಾಂಪ್ರದಾಯಿಕ ವಿಧಿವಿಧಾನ ನಡೆಯಿತು.
ಸ್ಥಳೀಯ ಗ್ರಾಮಸ್ಥನೊಬ್ಬ, “ಈ ಸಂಪ್ರದಾಯವು ಮಾತೃಪ್ರೇಮವನ್ನು ವ್ಯಕ್ತಪಡಿಸುವ ಗ್ರಾಮೀಣ ಆಚರಣೆಯಾಗಿದೆ. ವೃದ್ಧರು ಇದಕ್ಕೆ ಸಂತೋಷಪಡುತ್ತಾರೆ, ಆದರೆ ಇಂತಹ ಘಟನೆ ಈಗ ಸಾಮಾನ್ಯವಾಗಿಲ್ಲ,” ಎಂದು ತಿಳಿಸಿದ್ದಾರೆ. ಔತಣಕೂಟ, ವಾದ್ಯಗಾರರು ಮತ್ತು ಶವಪೆಟ್ಟಿಗೆ ಒಯ್ಯುವವರ ವೆಚ್ಚ ಸೇರಿ ಈ ವಿಧಿವಿಧಾನಕ್ಕೆ ಸುಮಾರು 2,800 ಡಾಲರ್ (2.4 ಲಕ್ಷ ರೂ.) ವೆಚ್ಚವಾಗಿದೆ.ಚೀನಾದ ಸಂಸ್ಕೃತಿಯಲ್ಲಿ, “ಗುವಾನ್‌ಕೈ” (ಶವಪೆಟ್ಟಿಗೆ) ಎಂಬ ಪದವು “ಅಧಿಕೃತ ಸಂಪತ್ತು” ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಶವಪೆಟ್ಟಿಗೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಜೀವಂತ ವೃದ್ಧರಿಗೆ ಶವಪೆಟ್ಟಿಗೆಯನ್ನು ಅನುಭವಿಸಲು ಬಿಡುವುದು ಆಶೀರ್ವಾದ, ದೀರ್ಘಾಯುಷ್ಯ ಮತ್ತು ಶಾಂತಿಯನ್ನು ತರುತ್ತದೆ ಎಂಬ ನಂಬಿಕೆ ಇದೆ.
