ಉದಯವಾಹಿನಿ, ಇಸ್ಲಾಮಾಬಾದ್: ಭಾರತ ಆಪರೇಷನ್ ಸಿಂದೂರ ಕೈಗೊಂಡ ವೇಳೆ ಪಾಕಿಸ್ತಾನ ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾಗಲಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಹೇಳಿದ್ದಾರೆ. ದೇಶದ ಪರಮಾಣು  ಕಾರ್ಯಕ್ರಮವು ಕೇವಲ ‘ಶಾಂತಿಯುತ ಚಟುವಟಿಕೆಗಳು ಮತ್ತು ಆತ್ಮರಕ್ಷಣೆಗಾಗಿ ಮಾತ್ರ’ಎಂದು ಹೇಳಿದ್ದಾರೆ. ಎಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಭಾರತವು ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ದಾಳಿಗೆ ಮುಂದಾದಾಗ ಭಾರತ ವೈಮಾನಿಕ ದಾಳಿ ಮೂಲಕ ಪಾಕ್‌ನ ಹಲವು ವಾಯುನೆಲೆಗಳನ್ನು ಧ್ವಂಸಗೊಳಿಸಿತ್ತು.ವಿದ್ಯಾರ್ಥಿಗಳ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದಲ್ಲಿ 55 ಪಾಕಿಸ್ತಾನಿಗಳು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಅದಕ್ಕೆ ಪಾಕಿಸ್ತಾನವು ಪೂರ್ಣ ಶಕ್ತಿಯಿಂದ ಪ್ರತಿಕ್ರಿಯೆಸಿದೆ ಎಂದಿದ್ದಾರೆ.

ಭಾರತ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಅಣ್ವಸ್ತ್ರ ಪ್ರಯೋಗಿಸುವ ಸಾಧ್ಯತೆ ಇತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಷರೀಫ್, ‘ಪಾಕಿಸ್ತಾನದ ಅಣ್ವಸ್ತ್ರಗಳು ಶಾಂತಿಯುತ ಚಟುವಟಿಕೆಗಳು, ರಾಷ್ಟ್ರೀಯ ಭದ್ರತೆಗೆ ಮಾತ್ರ. ಆಕ್ರಮಣ ಮಾಡಲು ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿಶ್ವದ ಮುಂದೆ ಪಾಕ್‌ ಶಾಂತಿ ಪಾಲನೆಯ ದೇಶ ಎಂದು ತೋರಿಸಿಕೊಳ್ಳುವ ನಾಟಕವಾಡಿದಂತಿದೆ.

ಪಾಕ್‌ಗೆ ದೋವಲ್‌ ದಿಟ್ಟ ಸವಾಲು: ಆಪರೇಷನ್ ಸಿಂದೂರ ಕೈಗೊಂಡ ಭಾರತಕ್ಕೆ ಅಪಾರ ಹಾನಿ ಮಾಡಿರುವುದಾಗಿ ಪಾಕಿಸ್ತಾನ ಬಡಾಯಿ ಕೊಚ್ಚಿಕೊಂಡ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಭಾರತಕ್ಕೆ ಆದ ಒಂದೇ ಒಂದು ಹಾನಿಯ ಫೋಟೋ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಭಾರತಕ್ಕೂ ಬಹಳ ಹಾನಿಯಾಗಿದೆ. ಭಾರತದ ರಫೇಲ್‌ ಯುದ್ಧವಿಮಾನ ಹೊಡೆದುರುಳಿಸಲಾಗಿದೆ ಎಂದು ವರದಿ ಮಾಡಿದ್ದ ವಿದೇಶಿ ಮಾಧ್ಯಮ ಹಾಗೂ ವಾದ ಮಾಡಿದ್ದ ಪಾಕ್‌ಗೆ ಪರೋಕ್ಷವಾಗಿ ಚಾಟಿ ಬೀಸಿದ ದೋವಲ್‌, ‘ಭಾರತಕ್ಕೆ ಆದ ಒಂದೇ ಒಂದು ಹಾನಿಯನ್ನು ಸಾಕ್ಷಿಯಾಗಿ ಕೊಡಿ. ಕಡೇ ಪಕ್ಷ ಒಂದು ಗಾಜು ಒಡೆದದ್ದಾದರೂ ತೋರಿಸಿ’ ಎಂದು ಸವಾಲೆಸೆದರು.

Leave a Reply

Your email address will not be published. Required fields are marked *

error: Content is protected !!