ಉದಯವಾಹಿನಿ, ನವದೆಹಲಿ: ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೋಮವಾರ ಸಂಜೆ 4:35ಕ್ಕೆ ಐಎಸ್‌ಎಸ್‌ನಿಂದ ಹೊರಟು, ಜು.15ರಂದು ಮಧ್ಯಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾದ ಕಡಲತೀರಕ್ಕೆ ಬಂದಿಳಿಯಲಿದ್ದಾರೆ. ಇಸ್ರೋ ನೇತೃತ್ವದ ಏಳು ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳಲ್ಲಿ ನಾಲ್ಕನ್ನು ಪೂರ್ಣಗೊಳಿಸಿದ್ದಾರೆ ಎಂದು ಇಸ್ರೋ ದೃಢಪಡಿಸಿದೆ.
ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳಾದ ಪೆಗ್ಗಿ ವಿಟ್ಸನ್, ಸ್ಲಾವೊಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಾಪು ಜೂ.26ರಂದು ಆಕ್ಸಿಯೋಂ-4 ಕಾರ್ಯಾಚರಣೆಯ ಭಾಗವಾಗಿ ಐಎಸ್‌ಎಸ್‌ಗೆ ತೆರಳಿದ್ದರು. ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ ಇಲ್ಲಿನ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಬೇಕಾಗುತ್ತದೆ. ಹಾಗಾಗಿ 7 ದಿನಗಳ ಕಾಲ ತಜ್ಞ ವೈದ್ಯರ ಮೂಲಕ ಪುನಶ್ಚೈತನ್ಯ ಕಾರ್ಯಕ್ರಮ ನಡೆಸಿ, ಭೂಮಿಯ ವಾತಾವರಣಕ್ಕೆ ಅವರ ದೇಹಸ್ಥಿತಿ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್) ತೆರಳಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಶುಕ್ಲಾ ನಿರ್ಮಿಸಿದ್ದಾರೆ. 1984ರಲ್ಲಿ ಭಾರತೀಯ ರಾಕೇಶ್ ಶರ್ಮಾ, ರಷ್ಯಾದ ಸೂಯೆಜ್ ನೌಕೆಯಲ್ಲಿ ಅಂತರಿಕ್ಷಕ್ಕೆ ಹೋಗಿದ್ದರು. ಹಲವು ಅಡೆತಡೆಗಳು, 6 ಮುಂದೂಡಿಕೆಗಳ ನಂತರ ಶುಭಾಂಶು ಶುಕ್ಲಾ ಸೇರಿ ನಾಲ್ವರ ಬಾಹ್ಯಾಕಾಶ ಯಾನ ಕೊನೆಗೂ ಯಶಸ್ವಿ ಗೊಂಡಿತ್ತು.ಗುರುತ್ವಾಕರ್ಷಣೆಯ ಕೊರತೆಯಲ್ಲಿ, ಬಾಹ್ಯಾಕಾಶಯಾತ್ರಿಗಳ ಸ್ನಾಯುಗಳು ತ್ವರಿತವಾಗಿ ದುರ್ಬಲಗೊಳ್ಳುತ್ತವೆ, ಇದು ಆಣ್ವಿಕ ಮತ್ತು ಕೋಶೀಯ ಬದಲಾವಣೆಗಳಿಗೆ ಸಂಬಂಧಿಸಿದ್ದು, ಈ ಸಂಶೋಧನೆಯು ಭವಿಷ್ಯದ ಬಾಹ್ಯಾಕಾಶ ಮಿಷನ್‌ಗಳಿಗೆ ಮಹತ್ವದ್ದಾಗಿದೆ. ಶುಕ್ಲಾ ಅವರ ಈ ಸಾಧನೆ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದೆ, ಜಾಗತಿಕ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದೆ.
