ಉದಯವಾಹಿನಿ, ಜಾರ್ಖಂಡ್: ರೈಲ್ವೆ ಹಳಿಗಳ ಬಳಿ ಆನೆಯೊಂದು ಮರಿಗೆ ಜನ್ಮ ನೀಡುತ್ತಿರುವಾಗ ರೈಲನ್ನು ಎರಡು ಗಂಟೆಗಳ ಕಾಲ ನಿಲ್ಲಿಸಿ ಮಾನವೀಯತೆಯನ್ನು ಮೆರೆದ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನುಷ್ಯ-ಪ್ರಾಣಿಗಳ ಸಾಮರಸ್ಯದ ಸಂದೇಶವನ್ನು ರವಾನಿಸಿದೆ. ಚಾಲಕನ ಈ ಸಮಯೋಚಿತ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.ವೈರಲ್ ವಿಡಿಯೋದಲ್ಲಿ, ರೈಲ್ವೆ ಹಳಿಗಳ ಬಳಿ ಆನೆಯೊಂದು ಮರಿಗೆ ಜನ್ಮ ನೀಡುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, ಆನೆ ತನ್ನ ಮರಿಯೊಂದಿಗೆ ಕಾಡಿನೊಳಗೆ ಹಿಂತಿರುಗಿ ನಡೆಯುವ ದೃಶ್ಯ ಕಾಣಿಸುತ್ತದೆ.

ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ರೈಲ್ವೆ ಸಿಬ್ಬಂದಿ ಮತ್ತು ಅರಣ್ಯ ಇಲಾಖೆಯ ಸೂಕ್ಷ್ಮತೆಯನ್ನು ಶ್ಲಾಘಿಸಿದ್ದಾರೆ. “ಮನುಷ್ಯ-ಪ್ರಾಣಿ ಸಂಘರ್ಷದ ಸುದ್ದಿಗಳಾಚೆ, ಈ ಘಟನೆ ಮನುಷ್ಯ-ಪ್ರಾಣಿಗಳ ಸಾಮರಸ್ಯದ ಸಹಬಾಳ್ವೆಯ ಉದಾಹರಣೆಯಾಗಿದೆ. ಜಾರ್ಖಂಡ್‌ನಲ್ಲಿ ಆನೆಯೊಂದು ಮರಿಗೆ ಜನ್ಮ ನೀಡುವವರೆಗೆ ರೈಲು ಎರಡು ಗಂಟೆ ಕಾದಿದೆ. ಆನೆ ಮತ್ತು ಮರಿ ಸಂತೋಷವಾಗಿ ನಡೆದು ಹೋದವು” ಎಂದು ಅವರು ತಿಳಿಸಿದ್ದಾರೆ.

ಭೂಪೇಂದರ್ ಯಾದವ್ ಅವರ ಮಾಹಿತಿ ಪ್ರಕಾರ, ಕೇಂದ್ರ ಪರಿಸರ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯವು ದೇಶಾದ್ಯಂತ 3,500 ಕಿಮೀ ರೈಲ್ವೆ ಹಳಿಗಳ ಸಮೀಕ್ಷೆ ನಡೆಸಿ 110ಕ್ಕೂ ಹೆಚ್ಚು ಸೂಕ್ಷ್ಮ ಸ್ಥಳಗಳನ್ನು ಗುರುತಿಸಿವೆ. ಈ ಪ್ರಯತ್ನಗಳಿಂದ ಹೃದಯಸ್ಪರ್ಶಿ ಫಲಿತಾಂಶ ಕಂಡುಬಂದಿದೆ ಎಂದು ಅವರು ತಿಳಿಸಿದ್ದು, ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿಯ ಸೂಕ್ಷ್ಮತೆಯನ್ನು ಸಚಿವರು ಶ್ಲಾಘಿಸಿದ್ದಾರೆ. ಸರಿಯಾದ ಕ್ಷಣದಲ್ಲಿ ರೈಲು ತಡೆದ ಚಾಲಕನಿಗೆ ಸಲಾಂ. ತಾಯಿ ಮತ್ತು ಮರಿಯ ಜೀವ ಉಳಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು, ಈ ಸಾಮರಸ್ಯ ಮತ್ತು ಕಾಳಜಿಯ ಸಹಕಾರ ತುಂಬಾ ಹೃದಯಸ್ಪರ್ಶಿಯಾಗಿದೆ. ಅರಣ್ಯ ಇಲಾಖೆ, ರೈಲ್ವೆ ಮತ್ತು ತಾಳ್ಮೆ ತೋರಿದ ಸಾರ್ವಜನಿಕರಿಗೆ ಧನ್ಯವಾದ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಮನುಷ್ಯರು ಪ್ರಾಣಿಗಳನ್ನು ಗೌರವಿಸುವ ಈ ದೃಶ್ಯ ನನಗೆ ಅಪಾರ ಸಂತೋಷ ನೀಡಿದೆ. ಈ ವಿಡಿಯೋ ಭೂಮಿಯ ಮೇಲಿನ ನಮ್ಮ ಸಹಬಾಳ್ವೆಗೆ ಆಶಾಭಾವನೆಯನ್ನು ತಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!