ಉದಯವಾಹಿನಿ, ಖ್ಯಾತ ನಟಿ ಬಿ.ಸರೋಜಾದೇವಿಯವರ ವೈವಿಧ್ಯಮಯ ಅಭಿನಯವೂ ತಲೆಮಾರುಗಳಲ್ಲಿ ಅಳಿಸಲಾಗದಂತಹ ಗುರುತನ್ನು ಬಿಟ್ಟುಹೋಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಖ್ಯಾತ ನಟಿ, ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಭಾರತೀಯ ಸಿನಿಮಾ ಹಾಗೂ ಸಂಸ್ಕೃತಿಯ ಆದರ್ಶ ಮೂರ್ತಿ ಅವರು, ತಮ್ಮ ವೈವಿಧ್ಯಮಯ ನಟನೆಯಿಂದಲೇ ತಲೆಮಾರುಗಳಲ್ಲಿ ಅಳಿಸಲಾಗದ ಗುರುತನ್ನು ಬಿಟ್ಟು ಹೋಗಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ನಟನಾ ಶೈಲಿಯ ಮೂಲಕ ಬಹುಮುಖ ಪ್ರತಿಭೆಯನ್ನು ಎತ್ತಿ ತೋರಿಸಿದ್ದಾರೆ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಕಂಬನಿ ಮಿಡಿದ ತಲೈವಾ: ತಮಿಳಿನ ಖ್ಯಾತ ನಟ ತಲೈವಾ ರಜನಿಕಾಂತ್ ಸಹ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ʻಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಒಂದು ಸುವರ್ಣ ಸಿನಿಮಾ ಯುಗ ಅಂತ್ಯಗೊಂಡಿದೆʼ ಅಂತ ಭಾವುಕ ಸಂದೇಶವೊಂದನ್ನ ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ.
ಸರೋಜಾದೇವಿ ಅಮ್ಮ ಎಲ್ಲಾ ಕಾಲಕ್ಕೂ ಶ್ರೇಷ್ಠ: ಬಹುಭಾಷಾ ನಟಿ ಖುಷ್ಬು ಸುಂದರ್ ಕೂಡ ಸರೋಜಾ ದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ʻಸರೋಜಾದೇವಿ ಅಮ್ಮ ಎಲ್ಲಾ ಕಾಲದಲ್ಲೂ ಶ್ರೇಷ್ಠರು. ದಕ್ಷಿಣದಲ್ಲಿ ಅವರಷ್ಟು ಹೆಸರು, ಖ್ಯಾತಿ ಪಡೆದ ಮಹಿಳಾ ನಟಿ ಇನ್ನೊಬ್ಬರಿಲ್ಲ. ಅವರು ನನ್ನ ಪ್ರೀತಿಯ ಮತ್ತು ಆರಾಧ್ಯ ದೈವವೂ ಕೂಡ ಹೌದು. ಅವರನ್ನು ಭೇಟಿಯಾಗದೇ ನನ್ನ ಬೆಂಗಳೂರಿಗೆ ಪ್ರವಾಸ ಅಪೂರ್ಣವಾಗಿತ್ತು. ಚೆನ್ನೈಗೆ ಬಂದಾಗೆಲ್ಲ ಅವರು ನನಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈಗ ಅವರನ್ನ ತುಂಬಾ ಮಿಸ್ ಮಾಡಿಕೊಳ್ತೀನಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
