ಉದಯವಾಹಿನಿ, ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರು ಇದೀಗ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕಿಳಿಯುತ್ತಿದ್ದಾರೆ. ಮಗನ ವಿರುದ್ಧ ಹಾಗೂ ಕುಟುಂಬದ ವಿರುದ್ಧ ನಾನಾ ರೀತಿಯ ಗಂಭೀರ ಆರೋಪಗಳ ನಡುವೆಯೂ ಪುತ್ರನನ್ನು ಕಾಪಾಡಲು ಪಣ ತೊಟ್ಟಿದ್ದಾರೆ. ಇದರ ಭಾಗ ಎಂಬಂತೆ ರಾಜ್ಯ ಬಿಜೆಪಿ ಕಚೇರಿಗೆ ಯಡಿಯೂರಪ್ಪ ನಿರಂತವಾಗಿ ಭೇಟಿ ನೀಡುತ್ತಿದ್ದು, ತನ್ನ ರಾಜಕೀಯ ಇರುವಿಕೆಯನ್ನು ತೋರಿಸುತ್ತಿದ್ದಾರೆ.ಬಿಜೆಪಿ ಬಣ ರಾಜಕೀಯ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ.

ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲೇಬೇಕೆಂದು ವಿರೋಧಿ ಬಣ ಪಣತೊಟ್ಟಿದೆ. ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ರೆಬೆಲ್‌ ಬಣದ ನಾಯಕರು ನೀಡಿದ ಹೇಳಿಕೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಬಿಎಸ್‌‍ವೈ ವಿರುದ್ಧ ನೇರವಾಗಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ತಿರುಗಿ ಬಿದ್ದಿದ್ದಾರೆ. ಕೆಜೆಪಿಗೆ ಹೋಗಿದ್ದ ಯಡಿಯೂರಪ್ಪ ಮರಳಿ ಬಿಜೆಪಿಗೆ ಬಂದಿದ್ಯಾಕೆ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ವರಿಷ್ಠರು ಸ್ಪಷ್ಟ ನಿರ್ಧಾರಕ್ಕೆ ಬರುತ್ತಿಲ್ಲ. ಬೇರೆ ರಾಜ್ಯಗಳ ರಾಜ್ಯಾಧ್ಯಕ್ಷರ ನೇಮಕ ಆದರೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ದೆಹಲಿ ನಾಯಕರು ನಿರ್ಧಾರವನ್ನು ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ವಿರೋಧಿ ಪಾಳಯದ ಕೈ ಮೇಲಾಗುವಂತೆ ಮಾಡುತ್ತಿದೆ.  ವಿಜಯೇಂದ್ರ ದೆಹಲಿಯಲ್ಲಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ರಾಜ್ಯದ ಸ್ಥಿತಿಗತಿಯನ್ನು ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ದಿನದಿಂದ ದಿನಕ್ಕೆ ರೆಬೆಲ್‌ ತಂಡ ಒಂದಲ್ಲಾ ಒಂದು ರೀತಿಯಲ್ಲಿ ವಿಜಯೇಂದ್ರ ವಿರುದ್ಧದ ಅಸಮಾಧಾನವನ್ನು ಹೊರಹಾಕುತ್ತಲೇ ಇದೆ. ಇದಕ್ಕೆ ಹೈಕಮಾಂಡ್‌ ಎಚ್ಚರಿಕೆ ಕೊಟ್ಟರೂ ಪರಿಣಾಮ ಬೀರುತ್ತಿಲ್ಲ.ಈ ಬೆಳವಣಿಗೆಯ ನಡುವೆಯೂ ಬಿ.ಎಸ್‌‍.ಯಡಿಯೂರಪ್ಪ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಪ್ರತಿನಿತ್ಯ ಬಿಜೆಪಿ ರಾಜ್ಯ ಕಚೇರಿಗೆ ಆಗಮಿಸಿ ಪಕ್ಷದ ಕಾರ್ಯಕರ್ತರಲ್ಲೂ ಹುರುಪು ತುಂಬಿಸುತ್ತಿದ್ದಾರೆ. ಬಿಎಸ್‌‍ವೈ ಈ ನಡೆ ದೆಹಲಿ ನಾಯಕರಿಗೆ ನೀಡುತ್ತಿರುವ ಪರೋಕ್ಷ ಸಂದೇಶವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!