ಉದಯವಾಹಿನಿ, ನವದೆಹಲಿ: ನಾವು ಬಹಳ ಇಷ್ಟಪಟ್ಟು ತಿನ್ನುವ ಕೆಲವು ಆಹಾರಗಳು ನಮಗೇ ಗೊತ್ತಿಲ್ಲದಂತೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತೊಡಗುತ್ತವೆ. ಅನಾರೋಗ್ಯಕರ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಕ್ರಮದಲ್ಲಿ ಕೇಂದ್ರ ಸರ್ಕಾರ ಸಮೋಸಾ ಜಿಲೇಬಿ ಪಕೋಡಾ, ವಡಾ ಪಾವ್ ಮತ್ತು ಬಿಸ್ಕತ್ತುಗಳಂತಹ ಜನಪ್ರಿಯ ತಿಂಡಿಗಳ ಬಗ್ಗೆ ಜನರಿಗೆ ಅದರ ಆರೋಗ್ಯ ಸಮಸ್ಯೆಗಳನ್ನು ತಿಳಿಸಬೇಕೆಂಬ ಕಾರಣದಿಂದ ಶೀಘ್ರದಲ್ಲೇ ಸಿಗರೇಟ್ ರೀತಿಯ ಆರೋಗ್ಯ ಅಲರ್ಟ್ಗಳನ್ನು ನೀಡಲಿದೆ. ಹೇಗೆ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಅಪಾಯಕಾರಿ ಎಂಬ ಅಲರ್ಟ್ ಇರುತ್ತದೆಯೋ ಅದೇರೀತಿ ಈ ಎಲ್ಲ ತಿಂಡಿಗಳ ಬಗ್ಗೆ ಸರ್ಕಾರಿ ಕ್ಯಾಂಟೀನ್ ಮತ್ತು ರೆಸ್ಟೋರೆಂಟ್ಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವುದು ಕಡ್ಡಾಯ ಎಂದು ಭಾರತ ಸರ್ಕಾರ ಘೋಷಿಸಿದೆ.
ಜೀವನಶೈಲಿಯ ಕಾಯಿಲೆಗಳಿಗೆ ನಿಕಟ ಸಂಬಂಧ ಹೊಂದಿರುವ ಈ ಆಹಾರಗಳಲ್ಲಿ ಎಣ್ಣೆ, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನ ಹೆಚ್ಚಿನ ಮಟ್ಟ ಇರುತ್ತದೆ. ಈ ಅಭಿಯಾನವನ್ನು ಮೊದಲು ನಾಗ್ಪುರದಲ್ಲಿ ಪ್ರಾರಂಭಿಸಲಾಗುತ್ತಿದೆ. ಅಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಾಗ್ಪುರ) ಈ ಉಪಕ್ರಮದ ಆರಂಭಿಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಈ ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಊಟದ ಸ್ಥಳಗಳು, ಫುಡ್ ಕೌಂಟರ್‌ಗಳ ಪಕ್ಕದಲ್ಲಿ ಈ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲಾಗುತ್ತದೆ.
ಭಾರತವು ದಿನದಿಂದ ದಿನಕ್ಕೆ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರವು ಜನರು ತಮ್ಮ ತಟ್ಟೆಯಲ್ಲಿ ಏನಿದೆ ಎಂಬುದರತ್ತ ಗಮನ ಹರಿಸಬೇಕೆಂದು ಒತ್ತಾಯಿಸುತ್ತಿದೆ. ಕರಿದ ಮತ್ತು ಸಕ್ಕರೆ ತಿಂಡಿಗಳ ಸೇವನೆಯು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. 2050ರ ವೇಳೆಗೆ ಅಂದಾಜು 440 ಮಿಲಿಯನ್ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರಬಹುದು ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆ ಅಂದಾಜಿಸಿದೆ. ಹೀಗಾಗಿ, ಜನರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
