ಉದಯವಾಹಿನಿ,ವಿಜಯನಗರ: ನಾಡಿನ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಬಿಲ್ ಪಾವತಿಗೂ ಹಣವಿಲ್ಲ. ಅನುದಾನ ಕೊರತೆಯಿಂದ ನಿರ್ವಹಣೆಯ ಸಂಕಷ್ಟ ಅನುಭವಿಸುತ್ತಿರುವ ವಿಶ್ವವಿದ್ಯಾಲಯ ಅಂದಾಜು 85 ಲಕ್ಷ ರೂ. ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡು ಹೆಣಗಾಡುತ್ತಿದೆ. ನಾಡಿನ ಏಕೈಕ ಭಾಷಾ ಸಂಶೋಧನಾ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯೊಂದಿಗೆ ಸ್ಥಾಪನೆಯಾಗಿರುವ ವಿವಿಗೆ ನಿತ್ಯ ನಿರ್ವಹಣೆಗೆ ಅನುದಾನವಿಲ್ಲದೇ ಪರಿತಪಿಸುತ್ತಿದೆ. ಸರಕಾರದ ಅನುದಾನ, ಆದಾಯದ ಇತರೆ ಮೂಲಗಳು ಇಲ್ಲದೇ ಕಷ್ಟಕರವಾಗಿದೆ. ಕನ್ನಡ ವಿವಿಗೆ ಒಂದು ವರ್ಷದ ಅಂದಾಜು 85 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇದೆ.
ವಿವಿಯ ವ್ಯಾಪ್ತಿಯ ಎಲ್ಲಾ ವಿಭಾಗಗಳು, ಆಡಳಿತಾಂಗ ಸೇರಿ ನಾನಾ ಕಟ್ಟಡಗಳಲ್ಲಿ ಬಳಸುವ ಮಾಸಿಕ ಬಿಲ್ ಪ್ರತಿ ತಿಂಗಳು ವಿವಿಯಲ್ಲಿ ಸುಮಾರು 10 ಲಕ್ಷ ರೂ. ಕರೆಂಟ್ ಬಿಲ್ ಬರುತ್ತದೆ. ನೂತನ ಕುಲಪತಿಗಳು ಬಂದ ಬಳಿಕ ಕಳೆದ ಮೂರು ತಿಂಗಳಿಂದ ಪ್ರತಿ ತಿಂಗಳು 10 ಲಕ್ಷ ರೂ.ನಷ್ಟು ಪಾವತಿಸಲಾಗುತ್ತಿದೆ. ಆದರೂ ಈಗಾಗಲೇ ಒಂದು ವರ್ಷದಿಂದ ಅನುದಾನದ ಸಮಸ್ಯೆ ಕಾರಣ ಬಿಲ್ ಪಾವತಿಸಲಾಗದೇ ದೊಡ್ಡ ಮೊತ್ತದ ಬಾಕಿ ಉಳಿದಿದೆ. ವಿವಿಗೆ ಬರುವ ಅನುದಾನದಲ್ಲಿಅಲ್ಪಸ್ವಲ್ಪ ಕಟ್ಟಿ ನಿರ್ವಹಣೆ ಮಾಡಲು ವಿವಿ ಆಡಳಿತ ಹೆಣಗುತ್ತಿದೆ. ರಾಜ್ಯ ಸರಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡುವ ಅನುದಾನ ಕೇವಲ ವಿದ್ಯುತ್ ಬಿಲ್‌ಗೂ ಸಾಲಲ್ಲಎಂಬುದು ವಿಪರ್ಯಾಸ. ಆದರೂ ವಿವಿಗೆ ಅನುದಾನ ಬಿಡುಗಡೆ ಮಾಡುವಲ್ಲಿಸರಕಾರಗಳು ಮತ್ತು ರಾಜಕಾರಣಿಗಳು ಇಚ್ಛಾಶಕ್ತಿ ತೋರುವಲ್ಲಿ ಹಿಂದೆ ಬಿದ್ದಿದ್ದಾರೆ.
