ಉದಯವಾಹಿನಿ,ಬೆಂಗಳೂರು: ಕಾಂಗ್ರೆಸ್ ಗದ್ದುಗೆ ಗುದ್ದಾಟ ಒಂದು ತಿಂಗಳಲ್ಲೇ ಬೀದಿಗೆ ಬಂದಿದೆ ಎಂದು ಬಿಜೆಪಿ ವ್ಯಂಗ್ಯವಾಗಿ ಟೀಕಿಸಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಬಿಜೆಪಿ, ‘ಮುಖ್ಯಮಂತ್ರಿ ಬದಲಾವಣೆ’ ಎಂಬುದು ಮಾಧ್ಯಮ ಸೃಷ್ಟಿಯೇ? ‘ಮಾಧ್ಯಮ’ ಅಂದ್ರೆ ಯಾರು ಸ್ವಾಮೀ? ಹೆಚ್. ಸಿ. ಮಹಾದೇವಪ್ಪ ಅವರಾ ಅಥವಾ ಸತೀಶ್ ಜಾರಕಿಹೊಳಿ ಅವರಾ? ಸಚಿವರಾದ ಎಂ. ಬಿ. ಪಾಟೀಲ್ ಅವರಾ ಅಥವಾ ಕೆ. ಎನ್. ರಾಜಣ್ಣ ಅವರಾ? ಎಂದು ಪ್ರಶ್ನಿಸಿದೆ. ನಾರದನ ತುತ್ತೂರಿ ಊದುತ್ತಿರುವುದು ಯಾರು? ಅಣ್ಣನನ್ನು ಮುಖ್ಯಮಂತ್ರಿ ಆಗಿ ನೋಡಲು ಕಾಯುತ್ತಿರುವ ಡಿ. ಕೆ. ಸುರೇಶ್ ಅವರು ಆಕ್ರಂದಿಸುವ ಮೊದಲು ಉತ್ತರಿಸಿ ಎಂದು ಸವಾಲು ಹಾಕಿದೆ.
ಕಾಂಗ್ರೆಸ್ ಹೈಕಮಾಂಡ್ ‘ಅಧಿಕಾರ ಹಂಚಿಕೆ ಸೂತ್ರ’ ಏನು?ಕಾಂಗ್ರೆಸ್ ನಾಯಕರ ಹೇಳಿಕೆ ಉಲ್ಲೇಖ. ಎಂಬಿ ಪಾಟೀಲ್ ಅವರು ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಎಂಬ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲಾರನ್ನೇ ಕೇಳಿ ಎಂದು ಡಿಕೆಶಿ ಹೇಳುತ್ತಾರೆ. ಡಾ. ಎಚ್ ಸಿ ಮಹದೇವಪ್ಪ ಅವರು, ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದರೆ ಸತೀಶ್ ಜಾರಕಿಹೊಳಿ ಅವರು, ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎನ್ನುತ್ತಾರೆ. ಕೆ.ಎನ್ ರಾಜಣ್ಣ ಅವರು ಸಿದ್ದರಾಮಯ್ಯ ಮುಂದಿನ 5 ವರ್ಷವೂ ಸಿಎಂ ಆಗಿ ಅವರೇ ಇರುತ್ತಾರೆ ಎಂದರೆ ಸಂಸದ ಡಿಕೆ ಸುರೇಶ್ ಅವರು, ಸಚಿವರಾಗಿ ಕೆಲಸ ಮಾಡುವುದಕ್ಕಿಂತ ಬೇರೆ ಆಸಕ್ತಿ ಜಾಸ್ತಿ ಎಂದು ಹೇಳುತ್ತಾರೆ. ಇನ್ನು ಡಿಕೆ ಶಿವಕುಮಾರ್ ಅವರು, ನಾನು ಫುಟ್‌ಬಾಲ್ ಆಡೋಕೆ ಬಂದಿಲ್ಲ, ಸನ್ಯಾಸಿನೂ ಅಲ್ಲ. ಚೇಸ್ ಆಡೋದು ಗೊತ್ತಿದೆ ಎಂದು ಹೇಳಿದ್ದಾರೆ ಎಂದು ಬಿಜೆಪಿ ಟ್ವೀಟ್ ನಲ್ಲಿ ತಿರುಗೇಟು ನೀಡಿದೆ.
