ಉದಯವಾಹಿನಿ, ಬೆಂಗಳೂರು: ದಶಕಗಳ ಕಾಲ ಬಹುಭಾಷೆಗಳಲ್ಲಿ ನಟಿಸಿದ್ದ ಕನ್ನಡದ ಮೊಟ್ಟ ಮೊದಲ ಸೂಪರ್‌ ಸ್ಟಾರ್‌ ನಟಿ ಪ್ರತಿಷ್ಠಿತ ಪದಭೂಷಣ ಪ್ರಶಸ್ತಿ ಪುರಸ್ಕೃತೆ ಬಿ.ಸರೋಜಾದೇವಿ ಅವರು ಪಂಚಭೂತಗಳಲ್ಲಿ ಇಂದು ಲೀನವಾದರು. ಕುಟುಂಬ ಸದಸ್ಯರ ಆಕ್ರಂದನ, ಅಭಿಮಾನಿಗಳ ಭಾರ ಹೃದಯದ ನಡುವೆಯೇ ವಯೋಸಹಜತೆಯಿಂದ ನಿಧನರಾಗಿದ್ದ ಬಿ.ಸರೋಜಾದೇವಿ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸ್ವಗ್ರಾಮ ದಶವಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಯಿತು. ಅವರ ಪುತ್ರ ಗೌತಮ್‌ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಬುದ್ಧ ನಟಿ ಎಂದೇ ಖ್ಯಾತಿಯಾಗಿದ್ದ ಸರೋಜಾದೇವಿ ಇನ್ನು ನೆನಪು ಮಾತ್ರ. ಸರೋಜದೇವಿಯವರ ಕೊನೆಯಾಸೆಯಂತೆ ಹುಟ್ಟೂರಿನಲ್ಲೇ ನನ್ನ ದೇಹ ಮಣ್ಣಾಗಬೇಕೆಂಬ ಇಚ್ಛೆಯಂತೆ ದಶವಾರದಲ್ಲಿರುವ ಅವರ ತೋಟದ ಮನೆಯಲ್ಲಿ ತಾಯಿ ರುದ್ರಮ ಅವರ ಸಮಾಧಿ ಪಕ್ಕದಲೇ ಅಂತ್ಯಕ್ರಿಯೆ ನಡೆಸಲಾಯಿತು. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್‌.ಸಿ.ಮಹದೇವಪ್ಪ, ಜಮೀರ್‌ ಅಹಮದ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಅಗಲಿದ ಅಭಿನಯ ಸರಸ್ವತಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು. ನಂತರ ಮಲ್ಲೇಶ್ವರಂ ನಿವಾಸದಿಂದ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಹುಟ್ಟೂರಿಗೆ ಕೊಂಡಯ್ಯಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಪಾರ್ಥೀವ ಶರೀರ ಬರುತ್ತಿದ್ದಂತೆ ಅಭಿಮಾನಿಗಳು ಅಂತಿಮ ವಿದಾಯ ಹೇಳಿದರು.

ವಾಹನವು ಬೆಂಗಳೂರಿನ ಮಲ್ಲೇಶ್ವರಂನಿಂದ ಹೊರಟು ಮೈಸೂರು-ಬೆಂಗಳೂರು ಎಕ್‌್ಸಪ್ರೆಸ್‌‍ ವೇನಲ್ಲಿ ಸಂಚರಿಸಿ ರಾಮನಗರ ತಲುಪಿದೆ. ನಂತರ ಅಲ್ಲಿಂದ ಚನ್ನಪಟ್ಟಣಕ್ಕೆ ಬಂದಾಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿನ ಸ್ಥಳೀಯರು ಮೇರುನಟಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.ನಂತರ ಹುಟ್ಟೂರು ದಶವಾರಕ್ಕೆ ಮಧ್ಯಾಹ್ನದ ವೇಳೆಗೆ ಆಗಮಿಸುತ್ತಿದ್ದಂತೆ ಗಾಂಧಿಭವನದಲ್ಲಿ ಒಂದು ಗಂಟೆ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಮೇರುನಟಿಗೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತಿನ ಕುಶಾಲು ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!