ಉದಯವಾಹಿನಿ, ಬೆಂಗಳೂರು: ಕೊನೆಗೂ ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ತತ್‌ಕ್ಷಣದಿಂದಲೇ ಅನ್ವಯವಾಗುವಂತೆ ಅಧಿಸೂಚನೆಯನ್ನು ರದ್ದುಪಡಿಸಿದೆ.
ಇದರಿಂದಾಗಿ ಕಳೆದ ಹಲವು ತಿಂಗಳಿನಿಂದ ತಮ ಜಮೀನು ಉಳಿಸಿಕೊಳ್ಳಲು ಪ್ರತಿಭಟನೆ ನಡೆಸುತ್ತಿದ್ದ ಅನ್ನದಾತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ, ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹದ್, ಕಾನೂನು ಸಲಹೆಗಾರ ಪೊನ್ನಣ್ಣ, ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ನಟ ಪ್ರಕಾಶ್ ರಾಜ್, ಬಡಗಲಪುರ ನಾಗೇಂದ್ರ, ದೇವನಹಳ್ಳಿ ರೈತ ಮುಖಂಡರು ಭಾಗವಹಿಸಿದ್ದರು.
ಚನ್ನರಾಯಪಟ್ಟಣದಲ್ಲಿ ರಾಜ್ಯ ಸರ್ಕಾರ ಒಟ್ಟು 1777 ಎಕರೆ ಜಮೀನನಲ್ಲಿ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ(ಕೆ ಐಎಡಿಬಿ) ಭೂಸ್ವಾಧೀನಕ್ಕೆ ಮುಂದಾಗಿತ್ತು. ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಬೆಲೆ ಬಾಳುವ ನಮ ಜಮೀನನ್ನು ನೀಡುವುದಿಲ್ಲ ಎಂದು ಹೋರಾಟ ನಡೆಸಿದ್ದರು. ನಾಲ್ಕು ಬಾರಿ ಸಭೆ ನಡೆಸಿದ್ದರೂ ಫಲಪ್ರದವಾಗಿರಲಿಲ್ಲ.
