ಉದಯವಾಹಿನಿ, ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 15 ಎಸೆತಗಳಲ್ಲಿ. ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ಕ್ ಭರ್ಜರಿ ಬೌಲಿಂಗ್ ಸಂಘಟಿಸಿದ್ದರು. ಈ ಭರ್ಜರಿ ಬೌಲಿಂಗ್ನೊಂದಿಗೆ ವರ್ಲ್ಡ್ ರೆಕಾರ್ಡ್ ತನ್ನದಾಗಿಸಿಕೊಳ್ಳುವಲ್ಲಿ ಆಸೀಸ್ ವೇಗಿ ಯಶಸ್ವಿಯಾಗಿದ್ದಾರೆ.
ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಮೊದಲ ಓವರ್ ಎಸೆದ ಮಿಚೆಲ್ ಸ್ಟಾರ್ಕ್ ಯಾವುದೇ ರನ್ ನೀಡದೇ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ ಮೂರನೇ ಓವರ್ನಲ್ಲಿ 6 ರನ್ ನೀಡಿ ಮತ್ತೆರಡು ವಿಕೆಟ್ಗಳನ್ನು ಪಡೆದರು. ಈ ಮೂಲಕ ಕೇವಲ 15 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ 5 ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಸ್ಟಾರ್ಕ್ ಪಾಲಾಯಿತು.
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಅಸ್ಟ್ರೇಲಿಯಾದ ಎರ್ನೀ ಟೋಶ್ಯಾಕ್, ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಹಾಗೂ ಆಸ್ಟ್ರೇಲಿಯಾದ ಸ್ಕಾಟ್ ಬೋಲ್ಯಾಂಡ್ ಹೆಸರಿನಲ್ಲಿತ್ತು. ಎರ್ನೀ ಟೋಶ್ಯಾಕ್ 1947 ರಲ್ಲಿ ಟೀಮ್ ಇಂಡಿಯಾ ವಿರುದ್ಧ 19 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದರು. ಇನ್ನು ಸ್ಟುವರ್ಟ್ ಬ್ರಾಡ್ 2015 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 19 ಎಸೆತಗಳಲ್ಲಿ 5 ವಿಕೆಟ್ಗಳನ್ನು ಉರುಳಿಸಿದ್ದರು. ಇನ್ನು 2021 ರಲ್ಲಿ ಸ್ಕಾಟ್ ಬೋಲ್ಯಾಂಡ್ ಇಂಗ್ಲೆಂಡ್ ವಿರುದ್ಧ 19 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದರು.
ಇದೀಗ ಈ ಮೂವರ ವಿಶ್ವ ದಾಖಲೆಯನ್ನುಅಳಿಸಿ ಹಾಕಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 2.3 ಓವರ್ಗಳಲ್ಲಿ 5 ವಿಕೆಟ್ ಕಬಳಿಸುವ ಮೂಲಕ, ಟೆಸ್ಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ ಐದು ವಿಕೆಟ್ಗಳನ್ನು ಉರುಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಸ್ಟಾರ್ಕ್ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ 7.3 ಓವರ್ಗಳಲ್ಲಿ 9 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ನಲ್ಲಿ 400+ ವಿಕೆಟ್ಗಳನ್ನು ಸಹ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 2ನೇ ಎಡಗೈ ವೇಗಿ ಎಂಬ ಹೆಗ್ಗಳಿಕೆಯನ್ನು ಸ್ಟಾರ್ಕ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನ್ ತಂಡದ ಮಾಜಿ ಎಡಗೈ ವೇಗಿ ವಾಸಿಂ ಅಕ್ರಂ (414) ಈ ಸಾಧನೆ ಮಾಡಿದ್ದರು. ಇದೀಗ 402 ವಿಕೆಟ್ಗಳೊಂದಿಗೆ ಮಿಚೆಲ್ ಸ್ಟಾರ್ಕ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
