ಉದಯವಾಹಿನಿ, ಪಟನಾ: ಬಿಹಾರ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ದೊಡ್ಡ ಘೋಷಣೆ ಮಾಡಿದ್ದಾರೆ. ಆಗಸ್ಟ್ 1, 2025ರಿಂದ, ಅಂದರೆ ಜುಲೈ ಬಿಲ್ಲಿಂಗ್ ಸಮಯದಿಂದ ರಾಜ್ಯದ ಎಲ್ಲ ಗೃಹ ಬಳಕೆದಾರರಿಗೆ 125 ಯೂನಿಟ್‌ಗಳವರೆಗಿನ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಎಕ್ಸ್‌ನಲ್ಲಿ ಈ ನಿರ್ಧಾರವನ್ನು ಘೋಷಿಸಿದ ನಿತೀಶ್ ಕುಮಾರ್, “ನಾವು ಆರಂಭದಿಂದಲೂ ಕೈಗೆಟುಕುವ ದರದಲ್ಲಿ ಎಲ್ಲರಿಗೂ ವಿದ್ಯುತ್ ಒದಗಿಸುತ್ತಿದ್ದೇವೆ. ಇದೀಗ, ಆಗಸ್ಟ್ 1, 2025ರಿಂದ ರಾಜ್ಯದ ಎಲ್ಲ ಗೃಹ ಬಳಕೆದಾರರಿಗೆ 125 ಯೂನಿಟ್‌ಗಳವರೆಗಿನ ವಿದ್ಯುತ್‌ಗೆ ಯಾವುದೇ ಶುಲ್ಕ ಇರುವುದಿಲ್ಲ” ಎಂದು ಬರೆದಿದ್ದಾರೆ. ಈ ಯೋಜನೆಯಿಂದ ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ, ಗೃಹ ಬಳಕೆದಾರರ ಒಪ್ಪಿಗೆ ಪಡೆದು ಅವರ ಮನೆಯ ಛಾವಣಿಗಳಲ್ಲಿ ಅಥವಾ ಸಮೀಪದ ಸಾರ್ವಜನಿಕ ಸ್ಥಳಗಳಲ್ಲಿ ಸೌರ ಶಕ್ತಿ ಸ್ಥಾವರಗಳನ್ನು ಸ್ಥಾಪಿಸಿ ಹೆಚ್ಚಿನ ಪ್ರಯೋಜನ ಒದಗಿಸುವುದಾಗಿ ನಿತೀಶ್ ಭರವಸೆ ನೀಡಿದ್ದಾರೆ. “ಈ ಕ್ರಮದಿಂದ ಗೃಹ ಬಳಕೆದಾರರಿಗೆ ಇನ್ನಷ್ಟು ಲಾಭ ತರಲಿದೆ” ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಈ ಘೋಷಣೆಗೆ ಮುನ್ನ, ಮಂಗಳವಾರ ನಿತೀಶ್ ಕುಮಾರ್ 30 ಪ್ರಮುಖ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದ್ದರು, ಇದರಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಉದ್ಯೋಗ ಒದಗಿಸುವ ಯೋಜನೆಯೂ ಸೇರಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗೆ ಮುಂಚಿತವಾಗಿ ಪ್ರಮುಖ ನಿರ್ಧಾರಗಳನ್ನು ಆಢಳಿತರೂಢ ಎನ್‌ಡಿಎ ತೆಗೆದುಕೊಳ್ಳುತ್ತಿದೆ. ಈ ನಿರ್ಧಾರಗಳು ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯೆಯಾಗಿ ತೆಗೆದುಕೊಂಡ ತಂತ್ರಗಾರಿಕ ಕ್ರಮ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ. ಈ ಯೋಜನೆಯು ಬಿಹಾರದ ಜನರಿಗೆ ಸುಸ್ಥಿರ ಶಕ್ತಿಯ ಮೂಲಕ ದೀರ್ಘಕಾಲೀನ ಪ್ರಯೋಜನ ತರುವ ಗುರಿಯನ್ನು ಹೊಂದಿದೆ.

Leave a Reply

Your email address will not be published. Required fields are marked *

error: Content is protected !!