ಉದಯವಾಹಿನಿ, ಬೆಂಗಳೂರು: ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ವಿಜಯ್ ಹಜಾರೆ ಟೂರ್ನಿಯ ಪಂದ್ಯ ಚಿನ್ನಸ್ವಾಮಿಯಲ್ಲಿ ಪ್ರೇಕ್ಷಕರಿಲ್ಲದೇ ನಡೆಯುವ ಸಾಧ್ಯತೆಯಿದೆ. ಡಿ.24ಕ್ಕೆ ದೆಹಲಿ ಮತ್ತು ಆಂಧ್ರಪ್ರದೇಶದ ಮಧ್ಯೆ ಮೊದಲ ಪಂದ್ಯ ನಿಗದಿಯಾಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕೆ ಇಳಿಯಲಿದ್ದಾರೆ. ದೆಹಲಿ ತಂಡದಲ್ಲಿ ಆಡಲಿರುವ ವಿಚಾರ ತಿಳಿದು ಕೊಹ್ಲಿ ಅವರನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದರು. ಆದರೆ ಭದ್ರತೆ, ಸುರಕ್ಷತೆ ವಿಚಾರವಾಗಿ ಪ್ರೇಕ್ಷಕರಿಗೆ ಸ್ಟೇಡಿಯಂ ಒಳಗೂ ಹೊರಗೂ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ.
ಪ್ರೇಕ್ಷಕರಿಗೆ ಅವಕಾಶ ಇಲ್ಲದೆ ಪಂದ್ಯ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಈಗಾಗಲೇ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರ ಇನ್ನೂ ಪಂದ್ಯ ಆಯೋಜಿಸಲು ಅನುಮತಿ ನೀಡಿಲ್ಲ. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.
ಕಳೆದ ಜುಲೈನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನ ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣದಿಂದ ಮಹಿಳಾ ವಿಶ್ವಕಪ್ ಪಂದ್ಯ ಕೂಡ ಕೈತಪ್ಪಿತ್ತು.
