ಉದಯವಾಹಿನಿ, ಈ ಹಿಂದೆ ಸ್ವಾರ್ಥ ರತ್ನ ಸೇರಿದಂತೆ ಎರಡು ಚಿತ್ರಗಳಲ್ಲಿ ನಟಿಸಿದ್ದ ಆದರ್ಶ ಗುಂಡುರಾಜ್ ಸದ್ಯ ಕ್ಯಾಲೆಂಡರ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ನಾನ್ಯಾರು ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿ, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇತ್ತೀಚೆಗೆ ಹಾಡು ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಸ್ವಾರ್ಥ ರತ್ನ ನಂತರ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದೇನೆ. ಇದು ನಾನು ನಾಯಕನಾಗಿ ನಟಿಸಿರುವ ಮೂರನೇ ಚಿತ್ರ. ವರ್ಷಗಳು ಕಳೆಯುತ್ತಿರುತ್ತದೆ. ಆದರೆ ದಿನವನ್ನು ಗುರುತಿಸಲು ನಮಗೆ ಕ್ಯಾಲೆಂಡರ್ ಬಹಳ ಸಹಾಯಕಾರಿ. ಶೀರ್ಷಿಕೆಗೂ ಹಾಗೂ ಚಿತ್ರಕ್ಕೂ ಸಂಬಂಧವಿದೆ. ನಾನೇ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ. ಹೆಣ್ಣುಮಕ್ಕಳಿಗಂತೂ ಈ ಕಥೆ ಬಹಳ ಹತ್ತಿರವಾಗುತ್ತದೆ. ಈಗಾಗಲೇ ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಇಂದು ನಾನ್ಯಾರೊ ಎಂಬ ಮೊದಲ ಹಾಡಿನ ಅನಾವರಣವಾಗಿದೆ. ಸಂಜಯ್ ವೈ ಬಿ ಹೆಚ್ ಹಾಗೂ ನವೀನ್ ಶಕ್ತಿ ಈ ಹಾಡನ್ನು ಬರೆದಿದ್ದು, ನನ್ನ ಮಗಳು ಅನುಷ್ಕಾ ಕಾಗಿನೆರೆ ಈ ಹಾಡನ್ನು ಹಾಡಿದ್ದಾರೆ. ಹೃತಿಕ್ ಪೂಜಾರಿ ಹಾಗೂ ಸಂಜಯ್ ಕೂಡ ಗಾಯನಕ್ಕೆ ಜೊತೆಯಾಗಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ ಎಂದು ನಾಯಕ ಹಾಗೂ ನಿರ್ಮಾಪಕ ಆದರ್ಶ ಗುಂಡುರಾಜ್ ತಿಳಿಸಿದರು.
