ಉದಯವಾಹಿನಿ, ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದರ್ಶನ್ ಮೇಲಿರುವ ಹಳೇ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಕೇಳಿದೆ. ದರ್ಶನ್ ಪವಿತ್ರಾ ಗೌಡ ಸೇರಿ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನ್ಯಾ. ಜೆ.ಬಿ ಪಾರ್ದಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ನಡೆಯಿತು.
ವಿಚಾರಣೆ ಸಂದರ್ಭದಲ್ಲಿ ಬೆಂಗಳೂರು ಪೊಲೀಸರ ಪರ ವಕೀಲರು, ಈ ಹಿಂದೆಯೂ ಹಲವು ಪ್ರಕರಣಗಳು ದರ್ಶನ್ ವಿರುದ್ಧ ದಾಖಲಾಗಿದೆ. ಗಂಭೀರ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ ಎಂದು ಗಮನಕ್ಕೆ ತಂದರು. ಈ ವೇಳೆ ಕೋರ್ಟ್, ದರ್ಶನ್ ಮೇಲಿರುವ ಹಳೆ ಕ್ರಿಮಿನಲ್ ಪ್ರಕರಣಗಳ ವಿವರ ನೀಡುವಂತೆ ಸೂಚಿಸಿತು. ವಿಚಾರಣೆ ವೇಳೆ ಹೈಕೋರ್ಟ್ ಆದೇಶಕ್ಕೆ ನ್ಯಾ. ಪಾರ್ದಿವಾಲ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹೈಕೋರ್ಟ್ ತನ್ನ ವಿವೇಚನೆಯನ್ನು ಸರಿಯಾಗಿ ಬಳಸಿಲ್ಲ ಎಂದು ನಾವು ಭಾವಿಸುತ್ತೇವೆ. ಹೈಕೋರ್ಟ್ ಆದೇಶವನ್ನು ಹೇಗೆ ನಿರ್ದೇಶಿಸಿದೆ ಎಂಬುದನ್ನು ನೀವು ನೋಡಿರಬೇಕು. ನೀವು ಏನು ಹೇಳುತ್ತೀರಿ ಎಂದು ದರ್ಶನ್ ಪರ ವಕೀಲ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿದರು.
61, 164 ಅಡಿಯಲ್ಲಿ ದಾಖಲಾದ ಹೇಳಿಕೆಯ ಬಗ್ಗೆ ವಾದಿಸಲು ದರ್ಶನ್ ಪರ ಕಪಿಲ್ ಸಿಬಲ್ ಮುಂದಾದರು. ಇದಕ್ಕೆ ಅವಕಾಶ ನೀಡದ ಕೋರ್ಟ್ ಅರ್ಜಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು
