ಉದಯವಾಹಿನಿ, ನವದೆಹಲಿ: ಮತಾಂತರ ಜಾಲವನ್ನು ನಡೆಸುತ್ತಿದ್ದ ಮತ್ತು ವಿದೇಶಿ ನಿಧಿಯಿಂದ ಅಪಾರ ಸಂಪತ್ತು ಗಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌‍) ದಿಂದ ಬಂಧನಕ್ಕೊಳಪಟ್ಟಿರುವ ಸ್ವಯಂ ಘೋಷಿತ ಧರ್ಮ ವೈದ್ಯ ಜಮಾಲುದ್ದೀನ್‌ ಶಾ ಅಥವಾ ಛಂಗೂರ್‌ ಬಾಬಾ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 14 ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಏಕಕಾಲದಲ್ಲಿ ದಾಳಿ ನಡೆಸಿದೆ.ಶಾ ಪ್ರಮುಖ ಧಾರ್ಮಿಕ ಮತಾಂತರ ಜಾಲದ ಸೂತ್ರಧಾರಿ ಎಂಬ ಆರೋಪದ ನಂತರ ಉತ್ತರ ಪ್ರದೇಶದ ಬಲರಾಂಪುರದಲ್ಲಿ 12 ಸ್ಥಳಗಳಲ್ಲಿ ಮತ್ತು ಮುಂಬೈನಲ್ಲಿ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಜಾರಿ ನಿರ್ದೇಶನಾಲಯವು ಗಣನೀಯ ಪ್ರಮಾಣದ ಭೂ ದಾಖಲೆಗಳು, ಐಷಾರಾಮಿ ವಾಹನಗಳು, ಚಿನ್ನ ಮತ್ತು ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ದಾಳಿ ನಡೆಸಲಾದ ಪ್ರಮುಖ ಸ್ಥಳಗಳಲ್ಲಿ ಒಂದು ಮುಂಬೈನ ಶಹಜಾದ್‌ ಶೇಖ್‌ಗೆ ಸಂಬಂಧಿಸಿದೆ. ಅಲ್ಲಿ ತನಿಖಾಧಿಕಾರಿಗಳು ಛಂಗೂರ್‌ ಬಾಬಾ ಅವರ ಖಾತೆಗಳಿಂದ ಶೇಖ್‌ ಅವರ ಖಾತೆಗಳಿಗೆ ಒಂದು ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಒಂದು ಕಾಲದಲ್ಲಿ ತನ್ನ ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಛಂಗೂರ್‌ ಬಾಬಾ, ಈಗ ವಿದೇಶಿ ಮೂಲದಿಂದ ಹಣ ಸಂಗ್ರಹಿಸಲಾದ ಅತ್ಯಾಧುನಿಕ ಮತಾಂತರ ಸಿಂಡಿಕೇಟ್‌ ಅನ್ನು ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!