ಉದಯವಾಹಿನಿ, ಬೆಂಗಳೂರು: ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುತ್ತಿರುವುದು ಅವರ ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯೇಂದ್ರ ಅವರಿಗೆ ಓದುವ ಅಭ್ಯಾಸವಿದ್ದರೆ, ಈ ದೇಶದ ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಭಾರತೀಯ ಜನತಾ ಪಕ್ಷ ಯಾವ ಯಾವ ಕಾಲದಲ್ಲಿ ಹೇಗೆಲ್ಲಾ ನಡೆಸಿಕೊಂಡಿದೆ ಎಂಬ ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಬಂಡಾರುಲಕ್ಷ್ಮಣ ಎಂಬ ಅಮಾಯಕ ದಲಿತ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಜೈಲಿಗೆ ತಳ್ಳಿದ್ದು ಮಾತ್ರವಲ್ಲ, ಅದೇ ಕೊರಗಿನಲ್ಲಿ ಅವರು ಸಾಯುವಂತೆ ಮಾಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಮಾತೆತ್ತಿದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಮೆರೆಸುವ ಬಿಜೆಪಿ ಅವರನ್ನೇ ಪ್ರಧಾನಮಂತ್ರಿ ಯಾಕೆ ಮಾಡಿಲ್ಲ? ಎ.ಪಿ.ಜೆ ಅಬ್ದುಲ್ ಕಲಾಮ್ ಅವರನ್ನು ರಾಷ್ಟ್ರಪತಿ ಮಾಡಿದ್ದೇ ಸಾಧನೆ ಎಂದು ಹೇಳಿಕೊಳ್ಳುವವರು, ಪ್ರಸಕ್ತ ಲೋಕಸಭೆಯಲ್ಲಿ ಬಿಜೆಪಿಗೆ ಸೇರಿರುವ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಯಾಕೆ ಇಲ್ಲ? ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವೇ..? ಎಂದು ಅವರು ಪ್ರಶ್ನೆಗಳ ಮಳೆಗರೆದಿದ್ದಾರೆ.
ಹಿಂದುಳಿದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಾ ಬಂದಿದೆ ಎನ್ನುವುದಕ್ಕೆ ರಾಜ್ಯದ ಹಿಂದುಳಿದ ಜಾತಿಗಳ ನಾಯಕ ಎಸ್.ಬಂಗಾರಪ್ಪನವರೇ ಸಾಕ್ಷಿ. ಬಂಗಾರಪ್ಪನವರನ್ನು ನಿಮ ತಂದೆ ಬಿ.ಎಸ್. ಯಡಿಯೂರಪ್ಪನವರು ಮುಗಿಸಿದರೆ, ಅವರ ಮಗ ಕುಮಾರ್ ಬಂಗಾರಪ್ಪನವರ ರಾಜಕೀಯವನ್ನು ನೀವು ಮುಗಿಸಲು ಹೊರಟಿದ್ದೀರಿ. ಇದರ ವಿವರವನ್ನು ಅವರು ನೀಡುತ್ತಲೇ ಇದ್ದಾರೆ. ಬಂಗಾರಪ್ಪನವರಿರಲಿ, ಪ್ರಧಾನಿ ನರೇಂದ್ರ ಮೋದಿ ಅವರೇ ಇರಲಿ, ಎಲ್ಲಿಯ ವರೆಗೆ ಇವರು ವರ್ಣ ವ್ಯವಸ್ಥೆ ಆಧಾರಿತ ಹಿಂದುತ್ವದ ಅಜೆಂಡಾಕ್ಕೆ ತಲೆ ಬಗ್ಗಿಸುತ್ತಾ ಇರುತ್ತಾರೋ, ಅಲ್ಲಿಯವರೆಗೆ ಮಾತ್ರ ಅವರ ತಲೆಗಳು ಸುರಕ್ಷಿತ. ಇದು ಮೋದಿಯವರಿಗೂ ತಿಳಿದಿರಲಿ ಎಂದು ಅವರು ಹೇಳಿದ್ದಾರೆ.
