ಉದಯವಾಹಿನಿ,ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 2022 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 247 ಮಂದಿ ಪಾದಚಾರಿಗಳು ಸಾವನ್ನಪ್ಪಿರುವುದು ನಗರ ಸಂಚಾರ ಪೊಲೀಸರ ವಿಸ್ತೃತ ವಿಶ್ಲೇಷಣಾ ವರದಿಯಿಂದ ತಿಳಿದುಬಂದಿದೆ. ಪಾದಚಾರಿಗಳ ಸಾವಿಗೆ ಕಾರಣವಾದ ಅಪಘಾತಗಳು 2020, 2021 ಮತ್ತು 2022 ರಲ್ಲಿ ಅತಿ ಹೆಚ್ಚು ಸಂಭವಿಸಿವೆ ಎಂದು 48 ಪುಟಗಳ ವರದಿಯಲ್ಲಿ ಹೇಳಲಾಗಿದೆ. ಬೆಂಗಳೂರು ನಗರದಲ್ಲಿ 2020 ಕ್ಕೆ ಹೋಲಿಸಿದರೆ 2022 ರಲ್ಲಿ ಅಪಘಾತಗಳ ಸಂಖ್ಯೆ 120 ಮತ್ತು ಮೃತಪಟ್ಟವರ ಸಂಖ್ಯೆ 115ರಷ್ಟು ಹೆಚ್ಚಾಗಿದೆ ಎಂದು ಪೊಲೀಸರ ವಿಶ್ಲೇಷಣೆ ತಿಳಿಸಿರುವುದಾಗಿ ವರದಿಯಾಗಿದೆ.
2022 ರಲ್ಲಿ ರಸ್ತೆ ಅಪಘಾತಗಳಿಂದಾಗಿ ಪಾದಚಾರಿಗಳ ಸಾವಿನ ಪ್ರಮಾಣ ಶೇಕಡಾ 53.41 ರಷ್ಟು ಹೆಚ್ಚಾಗಿದೆ. 2021 ಮತ್ತು 2020 ರಲ್ಲಿ ಕ್ರಮವಾಗಿ 161 ಮತ್ತು 164 ಪಾದಚಾರಿಗಳು ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಹೊರತಾಗಿಯೂ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿದೆ. 2022 ರಲ್ಲಿ, ಬೆಂಗಳೂರು ಟ್ರಾಫಿಕ್ ಪೊಲೀಸರು 1,04,49,571 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದು 2021 ರಲ್ಲಿ ದಾಖಲಿಸಿದ್ದ ಪ್ರಕರಣಗಳಿಗಿಂತ ಶೇ 12.29 ರಷ್ಟು ಹೆಚ್ಚಾಗಿದೆ.
