ಉದಯವಾಹಿನಿ, ಬೆಂಗಳೂರು: ನಗರದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಮಾಹಿತಿ ಬಂದಿರುವುದನ್ನು ಲಘುವಾಗಿ ಪರಿಗಣಿಸು ವುದಿಲ್ಲ. ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಶಾಲೆಗಳಿಗೆ ಬೆದರಿಕೆ ಕರೆ ಬಂದಿದ್ದು, ಬಾಂಬ್ ಬೆದರಿಕೆಯ ಅನೇಕ ಇ-ಮೇಲ್‌ಗಳೂ ಬಂದಿವೆ. ಇವುಗಳನ್ನು ಮೊದಲು ಪರಿಶೀಲನೆ ಮಾಡುತ್ತೇವೆ. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಏಕೆ ಈ ರೀತಿ ಮಾಹಿತಿ ಬರುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ. ಆನಂತರ ವಾಸ್ತವ ಏನೆಂಬುದು ಗೊತ್ತಾಗಲಿದೆ ಎಂದರು.
ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್‌ಗೆ ನೋಟಿಸ್ ನೀಡಲಾಗಿದೆ. ಅವರ ಹೇಳಿಕೆಯನ್ನು ದಾಖಲಿಸಲಾಗುತ್ತದೆ. ದೂರು ನೀಡಿದವರು ಅವರ ಹೆಸರನ್ನು ಸೇರಿಸಲೇಬೇಕೆಂದು ಒತ್ತಾಯಿಸಿರುವುದರಿಂದ ಸ್ವಲ್ಪ ಗೊಂದಲವಿದೆ ಎಂದು ತಿಳಿಸಿದರು.ಈ ವಿಚಾರದಲ್ಲಿ ಏನೇ ಇದ್ದರೂ ನಿಯಮಾನುಸಾರ ಕ್ರಮವಾಗಲಿದೆ. ನೋಟಿಸ್ ಕೊಟ್ಟಿರುವುದರಿಂದ ಅವರು ಬರಲೇಬೇಕಾಗುತ್ತದೆ ಎಂದರು.
ರಾಜಕಾರಣ ಇಲ್ಲ :ಭೈರತಿ ಬಸವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಬಿಜೆಪಿ ಇರುವುದೇ ಆರೋಪ ಮಾಡಲು. ಸ್ವಾಭಾವಿಕವಾಗಿ ಅವರು ಆರೋಪ ಮಾಡುತ್ತಾರೆ. ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕೆಲಸ ಮಾಡುತ್ತಾರೆ. ಎಫ್‌ಐಆರ್ ದಾಖಲಿಸಿರುವುದರ ಹಿಂದೆ ಯಾವುದೇ ರಾಜಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದರು.
