ಉದಯವಾಹಿನಿ, ನವದೆಹಲಿ: ಇತ್ತೀಚಿಗೆ ʻಸೂಪರ್‌ ಫುಡ್‌ʼ ಎನಿಸಿಕೊಂಡಂಥವು ಬಹಳಷ್ಟು ನಮಗೆ ಮೊದಲಿನಿಂದ ಗೊತ್ತಿರುವಂಥವೇ. ಭಾರತೀಯ ಅಡುಗೆಮನೆಗಳಲ್ಲಿ ಲಾಗಾಯ್ತಿನಿಂದಲೂ ಇದ್ದಂಥವು. ಆದರೆ ಅವುಗಳನ್ನು ಯಾಕಾಗಿ ಬಳಸುತ್ತಿದ್ದೇವೆ ಎಂಬ ಆರೋಗ್ಯದ ಮರ್ಮ ವೈಜ್ಞಾನಿಕವಾಗಿ ಗೊತ್ತಿರಲಿಲ್ಲವಷ್ಟೇ. ಈಗೀಗ ಅದೂ ಪ್ರಚುರಗೊಳ್ಳುತ್ತಿದೆ. ಉದಾಹರಣೆಗೆ ಹೇಳುವುದಾದರೆ, ಅಗಸೆ ಬೀಜ. ಮೊದಲಿನಿಂದಲೂ ಭಾರತೀಯ ಪಾರಂಪರಿಕ ಅಡುಗೆ ಪದ್ಧತಿಯಲ್ಲಿ ಇದರ ಬಳಕೆ ಇದ್ದರೂ, ಇತ್ತೀಚೆಗೆ ಕಡಿಮೆಯಾಗಿತ್ತು. ಪ್ರಾದೇಶಿಕವಾಗಿ ಕೆಲವು ಕಡೆಗಳಲ್ಲಷ್ಟೇ ಹೆಚ್ಚಾಗಿ ಇದು ಬಳಕೆಯಲ್ಲಿ ಇದ್ದಿದ್ದೂ ಕಾರಣವಾಗಿರಬಹುದು. ಆದರೀಗ ಈ ಕಿರುಬೀಜಗಳು ʻಸೂಪರ್‌ ಫುಡ್‌ʼಗಳ ಸಾಲಿಗೆ ಸೇರಿವೆ. ಹಾಗಾದರೆ ಅಗಸೆ ಬೀಜದ ಬಳಕೆಯ ಲಾಭಗಳೇನು?

ಬಹಳಷ್ಟು ಖಾದ್ಯಗಳ ರುಚಿಯನ್ನು ಹೆಚ್ಚಿಸುವ ಸಾಧ್ಯತೆ ಅಗಸೆ ಬೀಜಗಳಿಗಿದೆ. ಮೊಟ್ಟೆ ರಹಿತವಾಗಿ ಕೇಕ್‌ ಮಾಡುವಂಥ ಎಷ್ಟೋ ಮಂದಿ ಅಗಸೆ ಪುಡಿಯನ್ನೇ ಬೆಚ್ಚನೆಯ ನೀರಿಗೆ ಹಾಕಿ ನೆನೆಸಿ ಬಳಸುತ್ತಾರೆ. ಮೊಟ್ಟೆಯ ಲೋಳೆಯಂತೆಯೇ ಜೆಲ್‌ ಮಾದರಿಯಲ್ಲಿ ಅಗಸೆ ಪುಡಿಯ ಮಿಶ್ರಣವೂ ಒದಗಿ ಬರುತ್ತದೆ. ಭಾರತೀಯ ಆಹಾರಗಳಲ್ಲಿ ಚೆಟ್ನಿ ಪುಡಿ ಅಥವಾ ಒಗ್ಗರಣೆಯ ವ್ಯಂಜನವಾಗಿ ಧಾರಾಳವಾಗಿ ಬಳಸಬಹುದು. ಮಕ್ಕಳಿಗೆ ಸ್ಮೂದಿಯಂಥವುಗಳ ಜೊತೆಗೆ ಬೆರೆಸಬಹುದು.

ಸತ್ವಗಳೇನಿವೆ..?: ಒಂದು ಟೇಬಲ್‌ ಚಮಚ ಅಗಸೆ ಪುಡಿಯಲ್ಲಿ ಅಂದಾಜು 37 ಕ್ಯಾಲರಿಗಳು ದೊರೆಯಬಹುದು. ಅದರಲ್ಲಿ ಕಾರ್ಬ್‌ ಬಹುತೇಕ ಇಲ್ಲ ಎಂಬಂತಿದ್ದರೆ, ಆರೋಗ್ಯಕರ ಕೊಬ್ಬು 3 ಗ್ರಾಂ, ನಾರು 2 ಗ್ರಾಂ, ಪ್ರೊಟೀನ್‌ 1.3 ಗ್ರಾಂ ದೊರೆಯುತ್ತವೆ. ಇದಲ್ಲದೆ, ಥಿಯಾಮಿನ್‌, ತಾಮ್ರ, ಮ್ಯಾಂಗನೀಸ್‌, ಮೆಗ್ನೀಶಿಯಂ, ಫಾಸ್ಫರಸ್‌, ಸೆಲೆನಿಯಂ, ಜಿಂಕ್‌, ವಿಟಮಿನ್‌ ಬಿ6, ಕಬ್ಬಿಣ ಮತ್ತು ಫೋಲೇಟ್‌ಗಳು ಇದರಲ್ಲಿವೆ. ಆಲ್ಫ ಲಿನೊಲೆನಿಕ್‌ ಆಮ್ಲ ಎನ್ನುವ ಉತ್ಕೃಷ್ಟ ಮಟ್ಟದ ಒಮೇಗಾ ೩ ಫ್ಯಾಟಿ ಆಮ್ಲ ಇದರಲ್ಲಿದೆ. ಈ ಸತ್ವವನ್ನು ನಮ್ಮ ದೇಹ ತಯಾರಿಸಿಕೊಳ್ಳುವುದಿಲ್ಲ, ಆಹಾರದಿಂದಲೇ ದೊರೆಯಬೇಕು. ದೇಹದ ರಕ್ತನಾಳಗಳಲ್ಲಿ ಕೊಬ್ಬಿನಂಶ ಶೇಖರವಾಗದಂತೆ ಕಾಪಾಡಲು ಇದು ಅಗತ್ಯ. ಮಾತ್ರವಲ್ಲ, ಉರಿಯೂತವನ್ನೂ ಶಮನ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!