ಉದಯವಾಹಿನಿ, ಮಾಗಡಿ: ಖಾಸಗಿ ಶಾಲಾ ಬಸ್‌ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ ತಲೆಯ ಮೇಲೆ ಬಸ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಾಗಡಿ-ಕುಣಿಗಲ್ ರಸ್ತೆಯ ಹುಚ್ಚಹನುಮೇಗೌಡರ ಪಾಳ್ಯದ ಬಳಿ ನಡೆದಿದೆ.ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ಎಸ್‌ಬಿಎಸ್ ಪಬ್ಲಿಕ್ ಶಾಲೆಯ 3 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಜತ್ (7) ಮೃತ ವಿದ್ಯಾರ್ಥಿ. ಶಾಲೆಗೆ ದಾಖಲಾಗಿ ಒಂದುವರೆ ತಿಂಗಳಾಗಿತ್ತು. ಹನೂರು ಮೂಲದ ಗಾರೆ ಕೂಲಿಕಾರ್ಮಿಕರಾದ ಲೋಕೇಶ್ ಮತ್ತು ರಾಧ ಅವರ ಏಕೈಕ ಪುತ್ರ ರಜತ್. ಅಕ್ಕ ದುಷಿತಾ ಅವರೊಂದಿಗೆ ಎಸ್‌ಬಿಎಸ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಮೃತ ವಿದ್ಯಾರ್ಥಿಯ ಪೋಷಕರು ಹೊಸಪಾಳ್ಯ ಜನತಾ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶಾಲಾ ಅವಧಿ ಮುಗಿಸಿಕೊಂಡು ಮಕ್ಕಳನ್ನು ಮನೆಗೆ ಬಿಡಲು ಹೋಗುತ್ತಿದ್ದ ಶಾಲಾ ಬಸ್ ಚಾಲಕ ಅತಿವೇಗವಾಗಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಬಸ್‌ನಲ್ಲಿ ಮಕ್ಕಳನ್ನು ಮನಗೆ ಬಿಡಲು ಹೊರಟಿದ್ದ ಶಾಲೆಯ ಸಹಾಯಕಿ ಕಲ್ಯಾಕಾಲೋನಿ ಬಳಿ ಇಳಿದು ಮನೆಗೆ ಹೋದರು.

ಹುಚ್ಚಹನುಮೇಗೌಡರ ಪಾಳ್ಯದ ಬಸ್ ವೇಗವಾಗಿ ಚಲಿಸುತ್ತಿದ್ದ ಶಾಲಾ ಬಸ್‌ನ ಮುಂದಿನ ಬಾಗಿಲು ತೆರೆದುಕೊಂಡಿದೆ, ಬಸ್ ಚಾಲಕ ವಿದ್ಯಾರ್ಥಿ ರಜತ್‌ಗೆ ಬಸ್‌ನ ಬಾಗಿಲು ಮುಚ್ಚುವಂತೆ ತಿಳಿಸಿದ್ದಾನೆ. ಬಾಗಿಲು ಮುಚ್ಚಲು ಮುಂದಾದ ವಿದ್ಯಾರ್ಥಿ ಬಸ್‌ನಿಂದ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ವಿದ್ಯಾರ್ಥಿ ರಜತ್ ತಲೆಯ ಮೇಲೆ ಬಸ್‌ನ ಮುಂದಿನ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿ ಚಾಲಕನನ್ನು ಬಂಧಿಸಿದ್ದು ತನಿಖೆ ಕೈಗೊಂಡಿದ್ದಾರೆ. ಸಿಇಒ ನಾರಾಯಣ್, ಸಿಆರ್‌ಸಿ ಲಕ್ಷ್ಮೀನಾರಾಯಣ ಸ್ಥಳಕ್ಕೆ ಭೇಟಿ ನೀಡಿದ್ದರು. ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ವಿದ್ಯಾರ್ಥಿಯ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

Leave a Reply

Your email address will not be published. Required fields are marked *

error: Content is protected !!