ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಸಿಎಂಗೆ ಧಮ್ಮಿದ್ದರೆ, ತಾಕತ್ತಿದ್ದರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಿಸಿ. ಕೆಂದ್ರ ಸರ್ಕಾರ ನೀಡುವ 5 ಕೆಜಿ ಜೊತೆ 10 ಕೆಜಿ ಸೇರಿ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಆನಂದ್ ರಾವ್ ವೃತ್ತದ ಬಳಿ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಒಂದು ಕುಟುಂಬದಲ್ಲಿ 5 ಜನರಿದ್ದರೆ 75 ಕೆಜಿ ಕೊಡಬೇಕು. ಅದನ್ನು ಮಾಡದೆ ಪ್ರತಿಭಟಿಸುತ್ತೀರಾ? ನಿಮಗೆ ಅಧಿಕಾರ ಕೊಟ್ಟದ್ದು ಪ್ರತಿಭಟನೆ ಮಾಡಲೆಂದೇ? ಎಂದು ಪ್ರಶ್ನಿಸಿದರು. ಅದಲ್ಲದೇ ಇದೊಂದು ಸುಳ್ಳ – ಮಳ್ಳ ಸರಕಾರ.
ಸುಳ್ಳು ಹೇಳುವುದು ಮತ್ತು ಮೋಸ ಮಾಡುವ ಸರಕಾರವಿದು. ನಿಮಗೆ ನಾಚಿಕೆ ಇಲ್ಲವೇ? ಜವಾಬ್ದಾರಿ ಇಲ್ಲವೇ? ಎಂದು ಕೇಳಿದರಲ್ಲದೆ, ಇದೊಂದು ಬೇಜವಾಬ್ದಾರಿ ಸರಕಾರ ಎಂದು ಆರೋಪಿಸಿದರು. ರಾಜ್ಯ ಸರಕಾರ ಕರೆಂಟ್ ಶಾಕ್ ಕೊಡುತ್ತಿದೆ. ಇವತ್ತು ಇವರು ಕೊಟ್ಟ ಬಿಲ್ಲನ್ನು ಬಡವರು, ಕೈಗಾರಿಕೆದಾರರು ಸೇರಿ ಯಾರಿಗೂ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಸರಕಾರವೇ ವಿದ್ಯುತ್ ದರ ಏರಿಸಿದೆ. ದುಪ್ಪಟ್ಟು ಏರಿಕೆ ಆಗಿದೆ. ಮನಸ್ಸು ಮಾಡಿದರೆ ಅದನ್ನು ಏರಿಸದೇ ಇರಬಹುದಿತ್ತು. ಯಾಕೆ ಸ್ವಾಮೀ ಬಡವರ ಬಗ್ಗೆ ಮಾತನಾಡಿ ಅಧಿಕಾರ ಪಡೆದ ನೀವು ಬಡವರಿಗೆ ಮೋಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
