ಉದಯವಾಹಿನಿ, ಧಾರವಾಡ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಸತತ ಎರಡನೇ ಬಾರಿಗೆ ಬಿಜೆಪಿಯೇ ಆಡಳಿತದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಕೊಟ್ಟಿದ್ದ ಟಾಸ್ಕ್‌ನಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್ ಅವರು ತೀವ್ರ ಮುಖಭಂಗ ಎದುರಿಸಿದಂತಾಗಿದೆ. ಬಿಜೆಪಿಯಿಂದ ವೀಣಾ ಭರದ್ವಾಡ್‌ ಮೇಯರ್ ಆಗಿ ಹಾಗೂ ಉಪ ಮೇಯರ್ ಆಗಿ ಸತೀಶ್‌ ಹಾನಗಲ್ ಅವರು ಆಯ್ಕೆಯಾಗಿದ್ದಾರೆ. ಬಿಜೆಪಿ ಪಾಲಿಕೆಯಲ್ಲಿ ಮತ್ತೆ ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಪಾಲಿಕೆಯಲ್ಲಿ ಅಧಿಕಾರ ರಚನೆ ಮಾಡಬೇಕು ಎಂಬ ಕಾಂಗ್ರೆಸ್ ಕನಸು ಕಮರಿದಂತಾಗಿದೆ.

ಶತಾಯಗತಾಯ ಪಾಲಿಕೆಯಲ್ಲಿ ಅಧಿಕಾರ ರಚನೆ ಮಾಡಲು ಮಾಜಿ ಸಿಎಂ ಜಗದೀಶ್‌ ಶೆಟ್ಟರ್, ಸಚಿವರಾದ ಸತೀಶ್‌ ಜಾರಕಿಹೊಳಿ ಹಾಗೂ ಸಂತೋಷ್‌ ಲಾಡ್ ಅವರು ಕಾರ್ಯತಂತ್ರ ರೂಪಿಸಿದ್ದರು. ಆದರೆ, ಅವರ ಕಾರ್ಯತಂತ್ರ ಕೊನೆಗೂ ಫಲಿಸಲಿಲ್ಲ. ಕಾಂಗ್ರೆಸ್ ಪಕ್ಷ ಬಿಜೆಪಿ ಸದಸ್ಯರಿಗೆ ಆಸೆ, ಆಮಿಷಗಳನ್ನು ಒಡ್ಡಬಹುದು ಎಂದು ಬಿಜೆಪಿ ತನ್ನೆಲ್ಲಾ ಪಾಲಿಕೆ ಸದಸ್ಯರನ್ನು ದಾಂಡೇಲಿ ರೆಸಾರ್ಟ್‌ಗೆ ಶಿಫ್ಟ್ ಮಾಡಿತ್ತು. ಚುನಾವಣೆ ದಿನವೇ ಅವರನ್ನು ದಾಂಡೇಲಿಯಿಂದ ನೇರವಾಗಿ ಧಾರವಾಡದ ಮಂದಾರ ಹೋಟೆಲ್‌ಗೆ ಕರೆತಂದು ಅಲ್ಲಿಂದ ನೇರವಾಗಿ ಪಾಲಿಕೆಗೆ ಕರೆತಂದಿತು. ಬಿಜೆಪಿ ಪಕ್ಷದ ಸದಸ್ಯರು ಅಡ್ಡ ಮತದಾನ ಮಾಡದಂತೆ ಅವರಿಗೆ ವಿಪ್ ಕೂಡ ಜಾರಿ ಮಾಡಲಾಗಿತ್ತು. ಕಾಂಗ್ರೆಸ್, ಬಿಜೆಪಿ, ಎಂಐಎಂ ಹಾಗೂ ಪಕ್ಷೇತರ ಸದಸ್ಯರು ಕೂಡ ಸಭೆಗೆ ಹಾಜರಾಗಿದ್ದರು.

Leave a Reply

Your email address will not be published. Required fields are marked *

error: Content is protected !!