ಉದಯವಾಹಿನಿ, ಚಂಡೀಗಢ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ ಸ್ಪೂರ್ತಿದಾಯಕ ವಿಡಿಯೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ 88 ವರ್ಷದ ವೃದ್ಧರೊಬ್ಬರು ಏಕಾಂಗಿಯಾಗಿ ಬೀದಿಯನ್ನು ಸ್ವಚ್ಛಗೊಳಿಸುವ ವಿಡಿಯೊ ಹಂಚಿಕೊಂಡಿದ್ದಾರೆ. ಆ ವೃದ್ಧ ವ್ಯಕ್ತಿ ಬೇರಾರು ಅಲ್ಲ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಇಂದರ್ಜಿತ್ ಸಿಂಗ್ ಸಿಧು.ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಹೀಂದ್ರಾ ಅವರು ಚಂಡೀಗಢದ ರಸ್ತೆಯನ್ನು ಸ್ವಚ್ಛಗೊಳಿಸುತ್ತಿರುವ ಸಿಧು ಅವರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಿಧು ಅವರು ಚಂಡೀಗಢದಲ್ಲಿ ಸ್ವಚ್ಛತಾ ಅಭಿಯಾನವನ್ನು ಏಕಾಂಗಿಯಾಗಿ ಮುನ್ನಡೆಸುತ್ತಿದ್ದಾರೆ. ಸಿಧು ತನ್ನ ಸೆಕ್ಟರ್ 49ರ ಪ್ರದೇಶದಲ್ಲಿ ಕಸವನ್ನು ಗಾಡಿಗೆ ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರಿಂದ ಮೆಚ್ಚುಗೆ ಗಳಿಸಿದೆ.
1964ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಸಿಧು, ಬೆಳಗ್ಗೆ 6 ಗಂಟೆಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಏಕಾಂಗಿಯಾಗಿ, ಸ್ವಯಂ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಅವರು ರಸ್ತೆ ಸ್ವಚ್ಛಗೊಳಿಸುತ್ತಾರೆ. ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡ ಮಹೀಂದ್ರಾ, ಪ್ರತಿದಿನ ಬೆಳಗ್ಗೆ 6 ಗಂಟೆಗೆ, ಚಂಡೀಗಢದ ಸೆಕ್ಟರ್ 49ರ ಬೀದಿಗಳಲ್ಲಿ, ಈ 88 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ತಮ್ಮ ದಿನವನ್ನು ಸೇವೆಯಲ್ಲಿ ಪ್ರಾರಂಭಿಸುತ್ತಾರೆ ಎಂದು ಬರೆದಿದ್ದಾರೆ.
ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಚಂಡೀಗಢಕ್ಕೆ ಕಡಿಮೆ ಶ್ರೇಯಾಂಕ ಬಂದಿದ್ದರಿಂದ ಸಿಧು ನಿರಾಶಿಗೊಂಡಿದ್ದರು. ಬೇರೆಯವರನ್ನು ದೂರುತ್ತಾ ಕುಳಿತುಕೊಳ್ಳುವ ಬದಲು ಸ್ವತಃ ತಾವೇ ಸ್ವಚ್ಛತೆಯನ್ನು ಮಾಡಲು ಮುಂದಾದರು. ಯೌವನ ಮತ್ತು ವೇಗದ ಈ ಜೀವನಶೈಲಿಯಲ್ಲಿ, ಅವರ ನಿಧಾನವಾದ ಆದರೆ ಸ್ಥಿರವಾದ ಹೆಜ್ಜೆಗಳು ಉದ್ದೇಶದಿಂದ ಹಿಂದೆ ಸರಿಯುವುದಿಲ್ಲ. ಸೇವೆಗೆ ವಯಸ್ಸಾಗುವುದಿಲ್ಲ. ಬೀದಿಗಳ ಈ ಶಾಂತ ಯೋಧನಿಗೊಂದು ಸೆಲ್ಯೂಟ್ ಎಂದು ಮಹೀಂದ್ರಾ ಸಿಧು ಅವರನ್ನು ಹೊಗಳಿದ್ದಾರೆ.
