ಉದಯವಾಹಿನಿ, ಮ್ಯಾಂಚೆಸ್ಟರ್‌: ಇಂಗ್ಲೆಂಡ್‌(ENG vs IND) ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ದಿನವೇ ಆರಂಭಿಕ ಬ್ಯಾಟರ್‌ ಕೆ.ಎಲ್‌ ರಾಹುಲ್‌ ಅವರು ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ ಐದನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಹುಲ್‌ 32 ರನ್‌ ಗಳಿಸುತ್ತಿದ್ದಂತೆ ಈ ಸಾಧನೆಗೈದರು.
ಸಚಿನ್ ತೆಂಡೂಲ್ಕರ್ 1575 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ರಾಹುಲ್ ದ್ರಾವಿಡ್(1376), ಸುನಿಲ್ ಗವಾಸ್ಕರ್(1152) ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ಎರಡನೇ, ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಯನ್ನು ಮೀರಿಸುವ ಅದ್ಭುತ ಅವಕಾಶ ರಾಹುಲ್‌ಗೆ ಇದೆ. ಕೊಹ್ಲಿ 1096 ರನ್‌ ಗಳಿಸಿದ್ದಾರೆ.
ರಾಹುಲ್ 60 ರನ್‌ ಬಾರಿಸಿದರೆ ಭಾರತ ಪರ 9000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರ್ತಿಗೊಳಿಸಿದ ಸಾಧನೆ ಮಾಡಲಿದ್ದಾರೆ. ಇಲ್ಲಿಯವರೆಗೆ, ರಾಹುಲ್ 218 ಪಂದ್ಯಗಳಿಂದ 75.01ರ ಸರಾಸರಿಯಲ್ಲಿ 8,940 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 58 ಅರ್ಧಶತಕ ಒಳಗೊಂಡಿದೆ.
ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬೌಲಿಂಗ್‌ ಮಾಡಲು ನಿರ್ಧರಿಸಿತು. ಭಾರತ ಬ್ಯಾಟಿಂಗ್‌ ಆಹ್ವಾನ ಪಡೆಯಿತು. ನಿರೀಕ್ಷೆಯಂತೆ ಕಳೆದ ಮೂರು ಪಂದ್ಯಗಳಲ್ಲಿ ರನ್‌ ಬರಗಾಲ ಎದುರಿಸಿದ್ದ ಕರುಣ್‌ ನಾಯರ್‌ ಅವರನ್ನು ಕೈಬಿಟ್ಟು ಅವರ ಬದಲು ಸಾಯಿ ಸುದರ್ಶನ್‌ ಅವರನ್ನು ಆಡಲಿಳಿಸಲಾಯಿತು. ಹರ್ಯಾಣದ 24 ವರ್ಷದ ವೇಗಿ ಅಂಶುಲ್​ ಕಾಂಬೋಜ್​ ಭಾರತ ಪರ ಟೆಸ್ಟ್‌ ಪದಾರ್ಪಣೆ ಮಾಡಿದರು. ನಿತೀಶ್‌ ಕುಮಾರ್‌ ಸ್ಥಾನದಲ್ಲಿ ಶಾರ್ದೂಲ್‌ ಠಾಕೂರ್‌ ಅವಕಾಶ ಪಡೆದರು.

Leave a Reply

Your email address will not be published. Required fields are marked *

error: Content is protected !!