ಉದಯವಾಹಿನಿ, ಮುಂಬೈ: ಮಕ್ಕಳ ಆಸ್ಪತ್ರೆಯ ವೈದ್ಯರ ಚೇಂಬರ್‌ ಒಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬ ತನ್ನನ್ನು ತಡೆದ ರಿಸೆಪ್ಶನಿಸ್ಟ್‌ ಮೇಲೆ ಹಲ್ಲೆ ಮಾಡಿ ನೆಲಕ್ಕೆ ಕೆಡವಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮುಂಬೈ ಸಮೀಪದ ಕಲ್ಯಾಣದಲ್ಲಿನ ಶ್ರೀ ಬಾಲ್‌ ಚಿಕಿತ್ಸಾಲಯ ಎಂಬ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಹಲ್ಲೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಹೊಸದೊಂದು ವಿಡಿಯೊ ಹೊರ ಬಿದ್ದಿದೆ. ಅದರಲ್ಲಿ ಮೊದಲಿಗೆ ಆಸ್ಪತ್ರೆಯ ರಿಸೆಪ್ಶನಿಸ್ಟ್‌ ವ್ಯಕ್ತಿಯ ಸೋದರನ ಪತ್ನಿಗೆ (ಅತ್ತಿಗೆ) ಹೊಡೆಯುವುದು ಕಂಡು ಬಂದಿದೆ. ಹಿಂದೆ ವೈರಲ್‌ ಆಗಿದ್ದ ವಿಡಿಯೊದಲ್ಲಿ ಗೋಕುಲ್‌ ಝಾ ರಿಸೆಪ್ಶನಿಸ್ಟ್‌ಗೆ ಹೊಡೆದು, ಕೂದಲು ಎಳೆದು, ನಂತರ ನೆಲಕ್ಕೆ ಕೆಡವುತ್ತಿರುವ ದೃಶ್ಯ ವೈರಲ್ ಆಗಿತ್ತು.

ಹೊಸ ಸಿಸಿಟಿವಿ ದೃಶ್ಯದಲ್ಲಿ ಝಾ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸಹಿತ ಆಸ್ಪತ್ರೆಗೆ ಬಂದು ರಿಸೆಪ್ಶನಿಸ್ಟ್‌ ಅವರೊಂದಿಗೆ ವಾದದಲ್ಲಿ ತೊಡಗಿರುವುದನ್ನು ನೋಡಬಹುದು. ಈ ವೇಳೆ ಝಾ ಬೆದರಿಸುವ ರೀತಿಯಲ್ಲಿ ರಿಸೆಪ್ಶನಿಸ್ಟ್‌ ಹತ್ತಿರ ಬರುತ್ತಾನೆ. ಈ ಸಂದರ್ಭ ಆತನ ಸಬಂಧಕರೊಬ್ಬರು ಆತನನ್ನು ಹಿಂದಕ್ಕೆ ಹೋಗಲು ಒತ್ತಾಯಿಸುತ್ತಾರೆ.

ವಿವಾದ ಮುಂದುವರಿದಾಗ ಝಾ ಮತ್ತೊಮ್ಮೆ ಒಳಗೆ ನುಗ್ಗುತ್ತಾನೆ. ಆದರೆ ಈ ಬಾರಿ ಅವನೊಂದಿಗೆ ಬಂದ ಮತ್ತೊಬ್ಬ ಮಹಿಳೆ ಅವನನ್ನು ತಡೆದು ನಿಲ್ಲಿಸುತ್ತಾಳೆ. ನಂತರ ಅವನು ಹೊರಗೆ ಹೋಗುವಾಗ ರಿಸೆಪ್ಶನಿಸ್ಟ್‌ ತಮ್ಮ ಟೇಬಲ್‌ ಬಿಟ್ಟು ಹೊರಬಂದು ಕೆಲವು ಕಾಗದಗಳನ್ನು ನೆಲಕ್ಕೆ ಎಸೆಯುತ್ತಾ, ಅಲ್ಲಿಯೇ ನಿಂತಿದ್ದ ಝಾ ಅತ್ತಿಗೆ ಬಳಿ ನಡೆದು ಜೋರಾಗಿ ಕೂಗುತ್ತಾ ಕೆನ್ನೆಗೆ ಹೊಡೆದಿದ್ದಾಳೆ. ಈ ವೇಳೆ ಅವರೊಂದಿಗೆ ಬಂದ ಇನ್ನೊಬ್ಬ ಪುರುಷನು ಒಳಗೆ ಬಂದು ರಿಸೆಪ್ಶನಿಸ್ಟ್‌ ಕಡೆ ಬೆರಳು ತೋರಿಸುತ್ತಾ ವಾದಕ್ಕೆ ಇಳಿಯುತ್ತಾನೆ.

Leave a Reply

Your email address will not be published. Required fields are marked *

error: Content is protected !!