ಉದಯವಾಹಿನಿ ಬೆಳ್ತಂಗಡಿ: ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯನ್ನು (MPLADS) ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ (Smart Class) ಅಳವಡಿಕೆಗಾಗಿ ಪ್ರತಿ ಶಾಲೆಗೆ 1.46 ಲಕ್ಷ ರೂ.ದಂತೆ ಒಟ್ಟು 1.46 ಕೋಟಿ ರೂ. ಮಂಜೂರು ಮಾಡಿದ್ದಾರೆ.
ಈ ಮಾಹಿತಿಯನ್ನು ರಾಜ್ಯಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಜನಾರ್ದನ್ ಕೆ.ಎನ್. ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ, ಆಧುನಿಕ ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ರೂಪಿಸುವ ಸದುದ್ದೇಶದಿಂದ, ರಾಜ್ಯಸಭಾ ಸದಸ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ತಲಾ 1.46 ಲಕ್ಷ ರೂ.ದಂತೆ ಒಟ್ಟು ₹1.46 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಅನುದಾನದ ಮೂಲಕ, ಪ್ರತಿಯೊಂದು ಶಾಲೆಗೂ ಸ್ಮಾರ್ಟ್ ಕ್ಲಾಸ್ ರೂಮ್‌ಗಳನ್ನು ಅಳವಡಿಸಲಾಗುತ್ತದೆ. ಡಿಜಿಟಲ್ ಬ್ಲಾಕ್‌ ಬೋರ್ಡ್, ಪ್ರೊಜೆಕ್ಟರ್, ಕಂಪ್ಯೂಟರ್, ಇಂಟರ್ನೆಟ್‌ ಸೌಲಭ್ಯಗಳು ಮತ್ತು ಇತರ ತಂತ್ರಜ್ಞಾನ ಪರಿಕರಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದ್ದು, ಶಿಕ್ಷಣದ ಗುಣಮಟ್ಟ ಹೆಚ್ಚಲಿದೆ. ಜತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಲಭ್ಯವಾಗಲಿದೆ.
ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಕಳೆದ ಬಾರಿಯ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2.45 ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಸ್ಥಿರ ಹೈನುಗಾರಿಕೆ (ಹಾಲು ಉತ್ಪಾದನೆ) ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನೀಡಿದ್ದರು. ಈ ಅನುದಾನದಿಂದ ಹೈನುಗಾರಿಕೆ ಸಂಬಂಧಿತ ತಂತ್ರಜ್ಞಾನ ಪರಿಕರಗಳು, ಹೈಟೆಕ್ ಹವಾನಿಯಂತ್ರಿತ ನಿರ್ವಹಣಾ ಘಟಕಗಳು, ಪಶುಪಾಲಕರಿಗೆ ತರಬೇತಿ ಶಿಬಿರಗಳು ಹಾಗೂ ಹಾಲು ಸಂಗ್ರಹಣೆ ಮತ್ತು ಶೀತಲೀಕರಣ ಘಟಕಗಳು ಸ್ಥಾಪನೆಗೆ ನೆರವು ದೊರೆತಿದೆ.
ಗ್ರಾಮೀಣ ಪ್ರದೇಶದ ರೈತರು ಮತ್ತು ಹೈನುಗಾರರ ಆರ್ಥಿಕ ಸದೃಢತೆಯನ್ನು ಉತ್ತೇಜಿಸುವ ಜತೆಗೆ, ಸ್ಥಳೀಯ ಹಾಲು ಉತ್ಪಾದನೆಯ ಗುಣಮಟ್ಟ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ವೀರೇಂದ್ರ ಹೆಗ್ಗಡೆಯವರು ಅನುದಾನ ಮಂಜೂರು ಮಾಡಿದ್ದರು. ಇದರ ಪ್ರತಿಫಲವಾಗಿ ಇಂದು ಬೀದರ್ ಜಿಲ್ಲೆಯ ಅನೇಕ ರೈತರು ತಂತ್ರಜ್ಞಾನಾಧಾರಿತ ಹೈನುಗಾರಿಕೆ ವಿಧಾನಗಳನ್ನು ಅಳವಡಿಸಿಕೊಂಡಿದ್ದು, ಹಾಲಿನ ಸಂಗ್ರಹ ಸಾಮರ್ಥ್ಯವೂ ಹೆಚ್ಚಾಗಿದೆ.

Leave a Reply

Your email address will not be published. Required fields are marked *

error: Content is protected !!