ಉದಯವಾಹಿನಿ, ದೆಹಲಿ: ತನ್ನ ತಾಯಿ ಆನೆಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಸವನ್ನೆತ್ತಿ ಕಸದ ಬುಟ್ಟಿಗೆ ಹಾಕಿರುವ ಮರಿಯಾನೆಯ ವಿಡಿಯೊ ವೈರಲ್ ಆಗಿದೆ ಆನೆಮರಿ ಕಸ ವಿಲೇವಾರಿ ಮಾಡಲು ಕಸದ ಬುಟ್ಟಿಯನ್ನು ಬಳಸುವ ಹೃದಯಸ್ಪರ್ಶಿ ಮತ್ತು ಮುದ್ದಾದ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಅನೇಕರ ಹೃದಯ ಗೆದ್ದಿದೆ.ಈ ವಿಡಿಯೊ ಎಲ್ಲಿಯದು ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ ಆನೆಮರಿಯ ಸಾಮಾಜಿಕ ಕಳಕಳಿಯಿರುವ ಈ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ. ಈ ವಿಡಿಯೊವನ್ನು ರಾಜಕೀಯ ಮುಖಂಡರು ಮತ್ತು ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಆನೆ ಮತ್ತು ಮರಿಯಾನೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು ಗಮನಿಸಿದ ಆನೆಮರಿ ಅದನ್ನು ಎಚ್ಚರಿಕೆಯಿಂದ ಎತ್ತಿಕೊಂಡು ಡಸ್ಟ್‌ಬಿನ್‌ಗೆ ಹಾಕಿ ಮುಂದೆ ನಡೆದಿದೆ. ನಾಗರಿಕರಿಗೆ ಇರಬೇಕಾದ ಜವಾಬ್ದಾರಿಯನ್ನು ಈ ಪುಟ್ಟ, ಮುಗ್ಧ ಪ್ರಾಣಿ ತೋರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ ಮತ್ತು ಆತ್ಮಾವಲೋಕನವನ್ನು ಹುಟ್ಟುಹಾಕಿದೆ.
ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಕೂಡ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮರಿ ಆನೆ ಕಸದ ಬುಟ್ಟಿಯನ್ನು ಬಳಸಬಹುದಾದರೆ, ನಾವು ಏಕೆ ಮಾಡಬಾರದು ಎಂಬ ಶೀರ್ಷಿಕೆಯೊಂದಿಗೆ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.ಇನ್ನು ಈ ವಿಡಿಯೊ ತ್ವರಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನೇಕ ಪ್ರತಿಕ್ರಿಯೆಗಳು ಹರಿದು ಬಂದಿವೆ. ಬಳಕೆದಾರರೊಬ್ಬರು, ನಮ್ಮ ತ್ಯಾಜ್ಯದ ಪರಿಣಾಮಗಳಿಂದ ಆನೆಗಳು ಸಹ ಮುಕ್ತವಾಗಿಲ್ಲ. ಈ ಮರಿ ಆನೆಯಿಂದ ಮನುಷ್ಯರಿಗೆ ಒಂದು ಸೂಚನೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ಒಂದು ಮರಿ ಆನೆ ಕಸದ ಬುಟ್ಟಿಗೆ ಕಸವನ್ನು ಹಾಕಿದೆ. ಆದರೆ ಮನುಷ್ಯರು ಕಾರಿನ ಕಿಟಕಿಗಳಿಂದ ಚಿಪ್ಸ್ ಪ್ಯಾಕೆಟ್‌ಗಳನ್ನು ಎಸೆಯುವಲ್ಲಿ ನಿರತರಾಗಿದ್ದಾರೆ. ನಿಜವಾದ ಪ್ರಾಣಿ ಯಾರು? ಎಂದು ಪ್ರಶ್ನಿಸಿದ್ದಾರೆ.
ಆ ಎಳೆಯ ಆನೆಮರಿಯು ಅನೇಕ ವಯಸ್ಕರಿಗಿಂತ ಹೆಚ್ಚು ನಾಗರಿಕ ಪ್ರಜ್ಞೆಯನ್ನು ಹೊಂದಿತ್ತು ಎಂಬುದನ್ನು ನೆಟ್ಟಿಗರು ಎತ್ತಿ ತೋರಿಸಿದರು. ಇನ್ನು ಕೆಲವರು ಈ ವಿಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಕೆಲವರು ಇದನ್ನು ಎಐ ರಚಿತವಾಗಿರಬಹುದು ಎಂದು ಹೇಳಿದ್ದಾರೆ. ಇಂತಹ ಸಂದೇಹಗಳ ಹೊರತಾಗಿಯೂ, ಈ ಸಂದೇಶವು ಅನೇಕರನ್ನು ತಟ್ಟಿದೆ. ಏನೇ ಆಗಲಿ ಪುಟ್ಟ ಆನೆಮರಿ ಅನೇಕರ ಹೃದಯ ಗೆದ್ದಿದ್ದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *

error: Content is protected !!