ಉದಯವಾಹಿನಿ, ಬೆಂಗಳೂರು: ಮಹದಾಯಿ ಯೋಜನೆಗೆ ಅನುಮತಿ ಕೊಡುವುದಿಲ್ಲ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಮಹದಾಯಿ ವಿಚಾರವಾಗಿ ಗೋವಾ ವಿಧಾನಸಭೆಯಲ್ಲಿ ಗೋವಾ ಸಿಎಂ “ಅನುಮತಿ ಕೊಡಲ್ಲ” ಎಂದು ಹೇಳಿಕೆ ನೀಡಿದ್ದರು. ಇದು ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.ಗೋವಾದ ನಿಲುವಿನ ಕುರಿತಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಕೇಂದ್ರ ಮಲತಾಯಿ ಧೋರಣೆ ತಾಳುತ್ತಿದೆ. ಗೋವಾ ಸಿಎಂ ಹೇಳಿಕೆ ಆಕ್ರೋಶ ಮೂಡಿಸಿದೆ. ಮಹದಾಯಿಗೆ ಕೇಂದ್ರ ಅನುಮತಿ ಕೊಡ್ತಿಲ್ಲ. ಕೇಂದ್ರ ವಿಳಂಬ ಧೋರಣೆಯನ್ನ ಮಾಡ್ತಿದೆ. ಒಕ್ಕೂಟ ವ್ಯವಸ್ಥೆ ಅಶಕ್ತ ಮಾಡುವ ಧೋರಣೆ ಇದಾಗಿದೆ” ಎಂದು ಕಿಡಿಕಾರಿದರು. ಅನ್ಯಾಯ ಮಾಡದೆ ತಕ್ಷಣ ಅನುಮತಿ ಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ಗೋವಾ ಸಿಎಂ ಹೇಳಿಕೆಗೆ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿ, “ಗೋವಾ ಸಿಎಂ ಹೇಳಿಕೆಯನ್ನ ಖಂಡಿಸ್ತೇನೆ. ನಾವು ಪರಿಸರ ಇಲಾಖೆಗೆ ಮನವಿ ಕಳಿಸಿದ್ದೇವೆ. ಅನುಮತಿ ನೀಡುವಂತೆ ಕಳಿಸಿದ್ದೆವು. ಗೋವಾ ಸಿಎಂ ಅನುಮತಿ ಕೊಡಲ್ಲ ಅಂದಿದ್ದಾರೆ. ಇದು ರಾಜ್ಯದ ರೈತರ ಮೇಲೆ ಕೇಂದ್ರದ ಪ್ರಹಾರ” ಎಂದು ವಾಗ್ದಾಳಿ ನಡೆಸಿದರು. ಪ್ರತಿಯೊಂದು ವಿಷಯದಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಆಗ್ತಿದೆ. ಇದೇ ರೀತಿ ಆದರೆ ಒಕ್ಕೂಟ ವ್ಯವಸ್ಥೆಗೆ ಹೊಡೆತ. ಅನುದಾನದ ವಿಚಾರದಲ್ಲೂ ಅನ್ಯಾಯ ಆಗ್ತಿದೆ. ಇದರ ಬಗ್ಗೆ ಹೋರಾಟ ಮಾಡ್ತೇವೆ. ಅಗತ್ಯ ಬಿದ್ರೆ ಸುಪ್ರೀಂಕೋರ್ಟ್ ಗೆ ಹೋಗ್ತೇವೆ ಎಂದು ಎಚ್ಚರಿಕೆ ನೀಡಿದರು.
