ಉದಯವಾಹಿನಿ, ಬೆಂಗಳೂರು: ಬಿಲ್ಡರ್ಸಗಳಿಂದ ಶೇ.1 ರಷ್ಟು ಸೆಸ್ ಸಂಗ್ರಹಿಸುವ ಕರ್ನಾಟಕ ಅಗ್ನಿಶಾಮಕ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯಿದೆಯ ವ್ಯಾಪ್ತಿಗೆ ಒಳಪಡುವ ಬಿಲ್ಡರ್ಸ್ ಆಸ್ಪತ್ರೆ, ಎತ್ತರದ ಕಟ್ಟಡಗಳು, ಕೈಗಾರಿಕಾ ನಿರ್ಮಾಣಗಳಿಂದ ಆಸ್ತಿ ತೆರಿಗೆಯೊಂದಿಗೆ ಸೆಸ್ ಸಂಗ್ರಹಿಸಲಾಗುವುದು ಎಂದರು.
ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ 2024-2029ಕ್ಕೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ನೀತಿ ದಾಖಲೆಗಳಲ್ಲಿ ಸ್ಪಷ್ಟತೆ ಹಾಗೂ ನಿಖರತೆ ತರಲು ಈ ತಿದ್ದುಪಡಿ ತರಲಾಗುತ್ತಿದೆ. ಭಾಷೆ ಮತ್ತು ವಿವರಣೆಗೆ ಸೀಮಿತವಾಗಿರುವ ಬದಲಾವಣೆಗಳನ್ನು ಪರಿಷ್ಕರಿಸಿ ನಿಖರತೆ ತರುವ ನೀತಿಗೆ ಒಪ್ಪಿಗೆ ನೀಡಲಾಗಿದೆ ಎಂದರು. ರಾಯಚೂರಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪೆರಿಪೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲಾಗುತ್ತದೆ. ಇದರಿಂದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. 20 ಕೋಟಿ ರೂ.ಗಳಲ್ಲಿ ಸಿವಿಲ್ ಕಾಮಗಾರಿ, 30 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿ ಮಾಡಲಾಗುವುದು ಎಂದು ಹೇಳಿದರು. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಅಗತ್ಯ ಇರುವ ಹೆಚ್ಚುವರಿ ವೈದ್ಯಕೀಯ ಉಪಕರಣ, ಪೀಠೋಪಕರಣಗಳ ಖರೀದಿಗೆ 62 ಕೋಟಿ ರೂ. ವೆಚ್ಚದ ಆಡಳಿತಾತಕ ಅನುಮೋದನೆ ನೀಡಲಾಗಿದೆ ಎಂದರು.ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಗಿದ್ದು, ಮುಂದಿನ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುವುದಾಗಿ ತಿಳಿಸಿದರು.
